ಥೈಲೆಂಡ್ ಆಗ್ನೇಯ ಏಷ್ಯದ ಒಂದು ಸ್ವತಂತ್ರ ರಾಜ್ಯ. ಥೈಲಾಂಡ್ ಎಂಬುದು ಹಿಂದೆ ಇದಕ್ಕೆ ಇದ್ದ ಹೆಸರು. ಥೈಲಾಂಡ್ ಖಾರಿಯ ಪಶ್ಚಿಮ, ಉತ್ತರ ಮತ್ತು ಪೂರ್ವದಲ್ಲಿ, ಪೂ.ರೇ.970 - 1060 ಮತ್ತು ಉ.ಅ.60-210 ನಡುವೆ ಇದೆ. ಉತ್ತರ ಮತ್ತು ವಾಯುವ್ಯದಲ್ಲಿ ಮೈನ್‍ಮಾರ್, ಈಶಾನ್ಯ ಮತ್ತು ಪೂರ್ವದಲ್ಲಿ ಲಾವೋಸ್ ಮತ್ತು ಕಾಂಬೋಡಿಯ, ಆಗ್ನೇಯ ಮತ್ತು ದಕ್ಷಿಣದಲ್ಲಿ ಮಲಯ ಮತ್ತು ಥೈಲಾಂಡ್ ಖಾರಿ, ಪಶ್ಚಿಮದಲ್ಲಿ ಅಂಡಮಾನ್ ಸಮುದ್ರ ಮತ್ತು ಮೈನ್‍ಮಾರ್‍ಗಳಿಂದ ಬಳಸಲ್ಪಟ್ಟಿರುವ ಈ ದೇಶದ ವಿಸ್ತೀರ್ಣ 5,13,115 (2000) ಈ ದೇಶ ಪೂರ್ವ ಪಶ್ಚಿಮವಾಗಿ 772 ಕಿಮೀ, ಉತ್ತರ ದಕ್ಷಿಣವಾಗಿ 1770 ಕಿಮೀ, ಇದ್ದು 2615. ಕಿಮೀ ಸಮುದ್ರ ತೀರ ಹೊಂದಿದೆ. ಕ್ರಾ ಭೂಕಂಠದಲ್ಲಿ ಅದರ ಅಗಲ ಕೇವಲ 48 ಕಿಮೀ. ಥೈಲೆಂಡಿನ ಜನಸಂಖ್ಯೆ 6,19,09000 (2000). ರಾಜಧಾನಿ ಬ್ಯಾಂಗ್‍ಕಾಕ್.

ಮೇಲ್ಮೈ ಲಕ್ಷಣ: ಥೈಲೆಂಡನ್ನು ಐದು ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಬಹುದು: 1 ಮಧ್ಯದ ಕಣಿವೆ. 2 ಉತ್ತರದ ಮತ್ತು ವಾಯುವ್ಯದ ಖಂಡೀಯ ಪರ್ವತ ಪ್ರದೇಶ. 3 ಈಶಾನ್ಯಪ್ರದೇಶ, 4 ಆಗ್ನೇಯ ಕರಾವಳಿ ಮತ್ತು 5 ಪರ್ಯಾಯ ದ್ವೀಪ. ಮಧ್ಯದ ಕಣಿವೆ ಪ್ರದೇಶ ಥೈಲೆಂಡಿನ ಹಾಗೂ ಅಲ್ಲಿಯ ಜನರ ಹೃದಯ ಸ್ಥಾನ. ಇದು ಥೈಲಾಂಡ್‍ಖಾರಿಗೆ ಮುಮ್ಮೊಗನಾಗಿ ಹಬ್ಬಿರುವ ಪ್ರದೇಶ. ಇದರ ಮೂರು ಪಕ್ಕಗಳಲ್ಲಿ ಬೆಟ್ಟಗಳೂ ಪರ್ವತಗಳೂ ಹಬ್ಬಿವೆ. ಈ ಕಣಿವೆ ಚಾವ್ ಫ್ರೈಯ ನದಿಯ ಮತ್ತು ಉಪನದಿಗಳ ಮೆಕ್ಕಲು ಮಣ್ಣಿನ ಬಯಲು, ಉತ್ತರದಕ್ಷಿಣವಾಗಿ ಇದರ ಉದ್ದ 300 ಮೈ. ಇದರ ಸರಾಸರಿ ಅಗಲ 100 - 150 ಮೈ. ಈ ಮೈದಾನ - ಮುಖ್ಯವಾಗಿ ಥೈಲಾಂಡ್ ಖಾರಿಯ ತೀರದ ನದೀ ಮುಖಜಭೂಮಿ - ಥೈಲೆಂಡಿನ ಕೃಷಿಸಂಪದ್ಯುಕ್ತ ಪ್ರದೇಶ. ಥೈಲೆಂಡಿನ ಜನಸಂಖ್ಯೆಯ ಬಹು ಭಾಗ ಇರುವುದು ಇಲ್ಲಿ.

ಮಧ್ಯದ ಕಣಿವೆಯ ಉತ್ತರಕ್ಕೂ ಪಶ್ಚಿಮಕ್ಕೂ ಖಂಡೀಯ ಪರ್ವತಪ್ರದೇಶ ಹಬ್ಬಿದೆ. ಇದು ಉತ್ತರ ಥೈಲೆಂಡ್ ಭಾಗ. ಇದರ ಮೂರು ಪಕ್ಕಗಳಲ್ಲಿ ಮೈನ್‍ಮಾರ್ ಮತ್ತು ಲಾವೋಸ್ ದೇಶಗಳಿವೆ. ಇಲ್ಲಿ ಸ್ಥೂಲವಾಗಿ ಸಮಾಂತರದಲ್ಲಿ ಪರ್ವತಗಳು ಹಬ್ಬಿವೆ. ಈ ಶ್ರೇಣಿಗಳ ನಡುವೆ ನಾನ್, ಯಾಮ್, ವಾಂಗ್, ಪಿಂಗ್ ಮುಂತಾದ ನದಿಗಳು ದಕ್ಷಿಣಾಭಿಮುಖವಾಗಿ ಹರಿದು ಮಧ್ಯದ ಕಣಿವೆಯಲ್ಲಿ ಚಾವ್‍ಫ್ರೈಯ ನದಿಯನ್ನು ಸೇರುತ್ತವೆ. ಉತ್ತರದ ತುತ್ತತುದಿಯಲ್ಲಿ ನೀರಿನ ಓಟ ಉತ್ತರಾಭಿಮುಖ - ಮೇಕಾಂಗ್ ನದಿಯ ಕಡೆಗೆ, ಪಶ್ಚಿಮದ ಭಾಗ ಪಶ್ಚಿಮಕ್ಕೆ - ಮೈನ್‍ಮಾರ್‍ದಲ್ಲಿರುವ ಸಾಲ್ವೀನ ನದಿಯ ಕಡೆಗೆ - ಇಳಿಜಾರಾಗಿದೆ. ಉತ್ತರ ಥೈಲೆಂಡಿನ ಜನರಲ್ಲಿ ಜನರಲ್ಲಿ ಬಹುಭಾಗ ನೆಲಸಿರುವುದು ಪರ್ವಗಳ ನಡುವಣ ಕಿರು ಮೈದಾನಗಳಲ್ಲಿ ಹಾಗೂ ನದೀಕಣಿವೆಗಳಲ್ಲಿ, ಥೈಲೆಂಡಿನ ಅತ್ಯುನ್ನತ ಶಿಖರವಾದ ಡಾಯಿ ಇಂಥನನ್‍ನ ಎತ್ತರ 8514 ಅಡಿ. ಉತ್ತರದಿಂದ ದಕ್ಷಿಣಕ್ಕೆ ಮೈನ್‍ಮಾರ್ ಗಡಿಯ ಬಳಿಯ ಪ್ರದೇಶ ಖಂಡೀಯ ಪರ್ವತ ಪ್ರದೇಶದ ಒಂದು ಪ್ರತ್ಯೇಕ ಭಾಗ. ಕಡಿದಾದ ಪರ್ವತಗಳೂ ಆಳವಾದ ಕಂದರಗಳು ಕಿರಿದಾದ ಕಣಿವೆಗಳೂ ಇರುವ ಈ ಭಾಗದಲ್ಲಿ ಜನಸಾಂದ್ರತೆ ತೀರ ಕಡಿಮೆ. ಈ ಪರ್ವತ ಸೀಮೆಯ ನಡುವಣ ನೈಸರ್ಗಿಕ ಕಣಿವೆಗಳ ಪೈಕಿ ಮುಖ್ಯವಾದ್ದು ಮೂರು ಪಗೋಡಗಳ ಕಣಿವೆ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನೀಯರು ಥೈಲೆಂಡಿನಿಂದ ಮೈನ್‍ಮಾರ್‍ಕ್ಕೆ ಇದರ ಮೂಲಕ `ಮೃತ್ಯು ರೈಲ್ವೆ` ರಚಿಸಿದ್ದರು. ಈಗ ಇದನ್ನು ನಾಶಪಡಿಸಲಾಗಿದೆ.

ಖೋರಾತ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈಶಾನ್ಯ ಪ್ರದೇಶ ತಗ್ಗಿನ, ಅಲೆಯಾಗಿ ಏರಿಳಿಯುವ ಪ್ರಸ್ಥಭೂಮಿ. ಇದು ಉತ್ತರದಲ್ಲೂ ಪಶ್ಚಿಮದಲ್ಲೂ ಸಮುದ್ರಮಟ್ಟದಿಂದ 400 - 700 ಅಡಿ ಎತ್ತರವಾಗಿದೆ. ಆಗ್ನೇಯದ ಕಡೆಗೆ ಇಳಿಜಾರಾಗಿ ಆ ತುದಿಯಲ್ಲಿ 200 ಡಿಗಳೀಗೆ ತಗ್ಗುತ್ತದೆ. ಬೆಟ್ಟಗಳೂ ಪರ್ವತಶ್ರೇಣಿಗಳು ಪ್ರಪಾತಗಳೂ ಈ ಪ್ರದೇಶವನ್ನು ಪಶ್ಚಿಮದಲ್ಲಿ ಮಧ್ಯ ಕಣಿವೆಯಿಂದಲೂ ದಕ್ಷಿಣದಲ್ಲಿ ಕಾಂಬೋಡಿಯದಿಂದಲೂ ಪ್ರತ್ಯೇಕಿಸುತ್ತವೆ. ಇದರ ಉತ್ತರ ಹಾಗೂ ಪೂರ್ವದ ಬಹುಭಾಗದ ಎಲ್ಲೆಯಾಗಿ ಮೇಕಾಂಗ್ ನದಿ ಹರಿಯುತ್ತದೆ. ಈಶಾನ್ಯ ಪ್ರದೇಶದ ಬಹುಭಾಗದ ನೀರನ್ನು ಮೂನ್ ನದಿಯೂ ಅದರ ಮುಖ್ಯ ಉಪನದಿಯಾದ ಚೀ ಯನ್ನು ಕೂಡಿಕೊಂಡ ಮೂನ್ ನದಿ ಮೇಕಾಂಗಿನಲ್ಲಿ ಸಂಗಮಿಸುತ್ತದೆ.

ಆಗ್ನೇಯ ಕರಾವಳಿ ಪ್ರದೇಶ ತುಂಬ ಕಿರಿದಾದ್ದು. ಇದು ಥೈಲೆಂಡ್ ಖಾರಿಗೆ ಇದಿರಾಗಿದೆ. ಮಧ್ಯ ಕಣಿವೆ ಹಾಗೂ ಕಾಂಬೋಡಿಯದಿಂದ ಇದನ್ನು ಎತ್ತರವಾದ ಪರ್ವತಗಳು ಪ್ರತ್ಯೇಕಿಸುತ್ತವೆ. ಈ ಪರ್ವತಗಳು ಕೆಲವೆಡೆಗಳಲ್ಲಿ 5,000 ಅಡಿಗಳಿಗಿಂತ ಎತ್ತರವಾಗಿದೆ. ಕರಾವಳಿಯ ಅಂಚಿನಲ್ಲೂ ನದೀ ಕಣಿವೆಗಳಲ್ಲೂ ಜನಸಂದಣಿ ಹೆಚ್ಚು.

ಥೈಲೆಂಡಿನ ಪರ್ಯಾಯ ದ್ವೀಪ ಪ್ರದೇಶದ ಉತ್ತರದಲ್ಲಿ ಮಧ್ಯ ಕಣಿವೆ ಇದೆ. ಅಲ್ಲಿಮದ ದಕ್ಷಿಣದಲ್ಲಿರುವ ವಲಯದ ಗಡಿಯ ವರೆಗೆ ಹಬ್ಬಿರುವ ಈ ಪ್ರದೇಶದ ಉದ್ದ ಸು. 960 ಕಿ.ಮೀ. ಇದರ ಅಗಲ 16ಕಿ.ಮೀ. 216ಕಿ.ಮೀ ಗಳ ವರೆಗೆ ವ್ಯತ್ಯಾಸವಾಗುತ್ತದೆ. ಇದರ ಪಶ್ಚಿಮದಲ್ಲಿ ಅಂಡಮಾನ್ ಸಮುದ್ರವೂ ಪೂರ್ವದಲ್ಲಿ ಥೈಲೆಂಡ್ ಖಾರಿಯೂ ಇವೆ. ದಕ್ಷಿಣೋತ್ತರವಾಗಿ, ಹೆಚ್ಚು ಕಡಿಮೆ ಸಮಾಂತರವಾಗಿ, ಹಬ್ಬಿರುವ ಪರ್ವತಶ್ರೇಣಿಗಳು ಇದನ್ನು ಪೂರ್ವ ಹಾಗೂ ಪಶ್ಚಿಮ ಕರಾವಳಿಗಳಾಗಿ ವಿಂಗಡಿಸಿದೆ. ಪಶ್ಚಿಮ ಕರಾವಳಿ ಕಿರಿದು; ಕೆಲವೆಡೆಗಳಲ್ಲಿ ಪರ್ವತ ನೇರವಾಗಿ ಕಡಲೊಳಕ್ಕೆ ಇಳಿದಿದೆ. ಸಮುದ್ರತೀರ ಹಲವೆಡೆ ತೀರ ಅಂಕು - ಡೊಂಕು ಜವುಗಿನಿಂದ ಕೂಡಿದ್ದು. ಪೂರ್ವ ಕರಾವಳಿ ಹೆಚ್ಚು ಅಗಲ, ಕೆಲವೆಡೆ ಇದು 32ಕಿ.ಮೀ ಅಗಲವಾಗಿದೆ. ತೀರ ನೇರ. ಕೊಲ್ಲಿಗಳು ಕೆಲವೇ ಕೆಲವು. ಕಡಲ ದಂಡೆ ಉದ್ದವಾಗಿ ಹಬ್ಬಿದೆ. ಪರ್ಯಾಯದ್ವೀಪ ಪ್ರದೇಶದ ಜನವಸತಿ ಇರುವುದು ವಿಶೇಷವಾಗಿ ಕರಾವಳಿಗಳಲ್ಲಿ, ನದೀಕಣಿವೆಗಳಲ್ಲಿ.

ವಾಯುಗುಣ: ಥೈಲೆಂಡಿನದು ಉಷ್ಣವಲಯದ ವಾಯುಗುಣ. ಅಲ್ಲಿಯ ಬಹು ಭಾಗದಲ್ಲಿ ಮೂರು ಋತುಗಳನ್ನು ಖಚಿತವಾಗಿ ಕಾಣಬಹುದು: ಮಾರ್ಚ್ - ಮೇ ಬಿಸಿಲು ಕಾಲ, ಜೂನ್ - ಅಕ್ಟೋಬರ್ ಮಾನ್ಸೂನ್ ಮಳೆಗಾಲ. ನವೆಂಬರ್ - ಮಾರ್ಚ್ ಚಳಿಗಾಲ. ಖಂಡೀಯ ಪ್ರದೇಶದಲ್ಲಿ ಜೂನ್ - ಅಕ್ಟೋಬರ್ ಅವಧಿಯಲ್ಲಿ ವಿಶೇಷವಾಗಿ ಮಳೆಯಾಗುವುದಾದರೂ ಥೈಲೆಂಡಿನ ಪರ್ಯಾಯ ದ್ವೀಪ ಭಾಗದಲ್ಲಿ ಎಲ್ಲ ಋತುಗಳಲ್ಲೂ ಮಳೆಯಾಗುತ್ತದೆ; ಆದರೆ ಪಶ್ಚಿಮ ಕರಾವಳಿಯಲ್ಲಿ ಮೇ - ಅಕ್ಟೋಬರ್‍ನಲ್ಲಿ ಅಧಿಕ ಫೂರ್ವ ಕರಾವಳಿಯಲ್ಲಿ ಅಕ್ಟೋಬರ್ - ಜನವರಿ ಅವಧಿಯಲ್ಲಿ ಹೆಚ್ಚು. ಥೈಲೆಂಡಿನ ಬಹುಭಾಗದಲ್ಲಿ ಉಷ್ಣತೆ 550 ಈ ಗಿಂತ ಕಡಿಮೆಗೆ ಇಳಿಯುವುದಿಲ್ಲ. 950 ಈ ಗಿಂತ ಮೇಲಕ್ಕೆ ಏರುವುದಿಲ್ಲ. ವಾರ್ಷಿಕ ಸರಾಸರಿ ಮಳೆ 254 ಸೆಂ.ಮೀ.
ಸಸ್ಯ ಪ್ರಾಣಿ ಜೀವನ: ಥೈಲೆಂಡಿನ 705 ನೆಲ ಅರಣ್ಯಾವೃತ. ನಾನಾ ಬಗೆಯ ಮರಗಿಡಗಳು ಇಲ್ಲಿವೆ. ತೇಗ, ಪೈನ್ ಮುಂತಾದ ಗಟ್ಟಿಮರಗಳೂ ಬಿದಿರು, ವೀಳೆಯದೆಲೆ, ಬಳ್ಳಿ ತೆಂಗು ಮುಂತಾದವೂ ಬೆಳೆಯುತ್ತವೆ. ಕರಾವಳಿಯ ತಗ್ಗಿನ ಪ್ರದೇಶಗಳಲ್ಲಿ ಗುಲ್ಮ ಮತ್ತು ಬೆತ್ತದ ಹುಲ್ಲು ವಿಶೇಷ. ಜೌಗು ಪ್ರದೇಶದಲ್ಲೂ ಸರೋವರಗಳಲ್ಲೂ ಕಮಲವೇ ಮುಂತಾದ ಜಲಸಸ್ಯಗಳಿವೆ.

ಪಶ್ಚಿಮ ಮತ್ತು ಈಶಾನ್ಯದ ಅರಣ್ಯಗಳಲ್ಲಿ ಆನೆಗಳಿವೆ. ಹಿಂದೆ ಹೆಚ್ಚಾಗಿದ್ದ ಖಡ್ಗಮೃಗ ಹಾಗೂ ಟೇಪರ್‍ಗಳು ಈಗ ಅಪರೂಪ. ಹುಲಿ, ಚಿರತೆ, ಜಿಂಕೆ, ಥೈಲಾಂಡ್ ಬೆಕ್ಕು ಇವೆ. ನಾಗರಹಾವು, ಕೃಷ್ಣ ಸರ್ಪ, ವಿಷದ ನೀರು ಹಾವುಗಳು ಹೆಚ್ಚು. ಬ್ಯಾಂಗ್‍ಕಾಕ್ ಉರಗ ಸಾಕಣೆ ಕ್ಷೇತ್ರದಲ್ಲಿ ಹಾವುಗಳಿಂದ ಔಷಧಕ್ಕಾಗಿ ವಿಷ ಸಂಗ್ರಹಿಸುತ್ತಾರೆ.

ಕಡಲಲ್ಲಿ ವಿವಿಧ ಬಗೆಯ ಮೀನು. ಸೀಗಡಿ, ನಳ್ಳಿ, ಆಮೆಗಳಿವೆ. ನದಿಸರೋವರಗಳಲ್ಲಿ ಅನೇಕ ಜಾತಿಯ ಮೀನುಗಳು ಸಿಗುತ್ತವೆ.

ರಾಜ್ಯದಲ್ಲಿ ರೇಷ್ಮೆ ಹುಳುಗಳನ್ನು ಸಾಕುತ್ತಾರೆ. ಅರಣ್ಯಗಳಲ್ಲಿರುವ ಅನೇಕ ಬಗೆಯ ರೇಷ್ಮೆ ಹುಳುಗಳಲ್ಲಿ ಕೆಲವು ಬಗೆಯನ್ನು ಮಾತ್ರ ಕಸಿ ಮಾಡಲಾಗಿದೆ. ಆನೆಗಳನ್ನು ಪಳಗಿಸಿ ಮರದ ದಿಮ್ಮಿಗಳ ಸಾಗಣೆಗೂ ಇತರ ಕೆಲಸಗಳಿಗೂ, ಉಪಯೋಗಿಸುತ್ತಾರೆ.

ಜನಜೀವನ

ಜನ: ಥೈಲೆಂಡಿನಲ್ಲಿ ವಿಭಿನ್ನ ಇತಿಹಾಸ, ಭಾಷೆ, ಧರ್ಮ, ರೂಪ ಜೀವನವಿಧಾನಗಳ 30 ಜನಾಂಗಗಳಿವೆ. ಅದರ ಲಾವೋಸಿನ ಲಾವೋ ಮೈನ್‍ಮಾರ್‍ದ ಷಾನ್, ಮತ್ತು ದಕ್ಷಿಣ ಚೀನೀ ಗುಂಪುಗಳಿವೆ ಹತ್ತಿರ ಸಂಬಂಧವುಳ್ಳ ಥೈ ಜನರೇ ಒಟ್ಟು ಜನಸಂಖ್ಯೆಯ ಸೇ. 80 ರಷ್ಟು ಇದ್ದಾರೆ. ಥೈಲೆಂಡಿನಲ್ಲಿರುವ ಥೈ ಜನರನ್ನು ಮೂರು ದೊಡ್ಡ ಹಾಗೂ ಮೂರು ಸಣ್ಣ ಗುಂಪುಗಳಾಗಿ ವಿಂಗಡಿಸಬಹುದು. ಮಧ್ಯದ ಕಣಿವೆ, ಪರ್ಯಾಯದ್ವೀಪ ಮತ್ತು ಆಗ್ನೇಯ ಕರಾವಳಿಯ ಥೈಲೆಂಡಿನ ವಾಯುವ್ಯ ಕೊನೆಯ ಷಾನ್, ಉತ್ತರ ಥೈಲೆಂಡಿನ ಈಶಾನ್ಯ ವಿಭಾಗದಲ್ಲೂ - ಇವು ಸಣ್ಣ ಗುಂಪುಗಳು. ಎಲ್ಲ ಥೈಗಳೂ ಸಮಾನ ಭಾಷೆಯಿಂದ ಒಂದಾಗಿದ್ದಾರೆ. ಅಲ್ಪಸಂಖ್ಯಾತ ಜನಾಂಗಗಳಲ್ಲಿ ಮುಖ್ಯವಾದವು ಇವು: ಚೀನೀ, ಭಾರತೀಯ, ಮಲಯ್, ಕಾಂಬೋಡಿಯನ್, ಕುಯಿ, ಕಾಲಿಯೂಗ್ ಮೂನ್, ವಿಯಟ್ನಾಮೀ ಅಥವಾ ಅನ್ನಾಮೀ ಮತ್ತು ಕರೆನ್. ಭಾರತೀಯರು ದೇಶದಲ್ಲೆಲ್ಲ ಅಲ್ಲಲ್ಲಿ ಹರಡಿದ್ದಾರೆ. ಇವರ ಮುಖ್ಯ ಕಸಬು ವ್ಯಾಪಾರ ಮಲೇಷಿಯದ ಗಡಿಯ ಬಳಿ, ದಕ್ಷಿಣಪರ್ಯಾಯ ದ್ವೀಪದಲ್ಲಿ ಮಲಯನರಿದ್ದಾರೆ; ಅಗ್ನೇಯ ಕರಾವಳಿಯಲ್ಲೂ ಇವರು ಅಲ್ಪ ಸಂಖ್ಯೆಯಲ್ಲಿದ್ದಾರೆ. ಕಾಂಬೋಡಿಯನ್ ಗಡಿಯ ಉದ್ದಕ್ಕೂ ಕಾಬೋಡಿಯನರಿದ್ದಾರೆ. ಕುಯಿಗಳೂ ಕಾಲಿಯೂಂಗರೂ ಇರುವುದು ಈಶಾನ್ಯದಲ್ಲಿ. ಮೋನ್ ಜನರು ಪರ್ಯಾಯ ದ್ವೀಪ ಭಾಗದಲ್ಲಿ ಮೈನ್‍ಮಾರ್ ಗಡಿಯುದ್ಧಕ್ಕೂ ಇದ್ದಾರೆ; ಇತರೆಡೆಗಳಲ್ಲಿ ಖೋರಾತ್‍ನಲ್ಲೂ ಆಗ್ನೇಯ ವಿಯೆಟ್ನಾಮೀ ಅಥವಾ ಅನಾಮೀ ಜನರು ದಕ್ಷಿಣ ಖೋರಾತ್‍ನಲ್ಲೂ ಆಗ್ನೇಯ ಕರಾವಳಿಯಲ್ಲೂ ಇದ್ದಾರೆ. ಕರೆನ್ ಜನರು ಮೈನ್‍ಮಾರ್ ಗಡಿಯ ಉದ್ದಕ್ಕೂ ಇದ್ದಾರೆ. ಇವರಲ್ಲದೆ ಅಖಾ, ಮುಸ್ಸೊ, ವಿಯೊ, ಕಾಮೂಕ್, ಟಿನ್, ಲಾವ, ಸೋ ಮುಂತಾದ ಇಪ್ಪತ್ತು ಅಲ್ಪಸಂಖ್ಯಾತ ಗುಂಪುಗಳನ್ನು ಕಾಣಬಹುದು. ಈ ಗುಂಪುಗಳದು ಆದಿಮಸ್ವರೂಪ. ಈ ಗುಂಪುಗಳ ಜನಸಂಖ್ಯೆ ಅಲ್ಪ. ಪರ್ವತ ಪ್ರದೇಶಗಳಲ್ಲೂ ಅರಣ್ಯಗಳಲ್ಲೂ ಇವರು ವಾಸಿಸುತ್ತಾರೆ. 

ಭಾಷೆ: ಥೈ ಭಾಷೆಯಲ್ಲಿ ನಾಲ್ಕು ಪ್ರಭೇದಗಳುಂಟು. ಉತ್ತರ, ಪೂರ್ವ, ಮಧ್ಯ, (ಬ್ಯಾಂಗ್‍ಕಾಕ್ ಅಥವಾ ಅಧಿಕೃತ) ಮತ್ತು ದಕ್ಷಿಣ ಭಾಗಗಳಲ್ಲಿ ಈ ನಾಲ್ಕು ಉಪಭಾಷೆಗಳಿವೆ. ಎಲ್ಲಕ್ಕೂ ಚೀನಿ ಭಾಷೆಯೊಂದಿಗೆ ದೂರದ ನಂಟುಂಟು. ಒಂದು ಉಪಭಾಷೆಯನ್ನಾಡುವವರು ಇನ್ನೊಂದು ಉಪಭಾಷೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಅಲ್ಪಸಂಖ್ಯಾತ ಜನಾಂಗಗಳವರು ತಂತಮ್ಮ ಭಾಷೆಗಳನ್ನಾಡುವವರಾದರೂ ಥೈ ಭಾಷೆ ಎಲ್ಲರಿಗೂ ಅರ್ಥವಾಗುತ್ತದೆ. ಚೀನೀಯರು ದ್ವಿಭಾಷೆಗಳು. ಇಂಗ್ಲೀಷಿನವರು ಹಲವು ಪ್ರೌಢ ಶಾಲೆಗಳಲ್ಲೂ ಕಾಲೇಜುಗಳಲ್ಲೂ ಬೋಧಿಸಲಾಗುತ್ತದೆ. ಇದನ್ನು ಆಧಿಕಾರಿ ಹಾಗೂ ವಾಣಿಜ್ಯವರ್ಗಗಳು ಬಳಸುತ್ತವೆ. 

ಧರ್ಮ: ರಾಜ್ಯದಲ್ಲಿ ಹೀನಯಾನ ಬೌದ್ಧಮತ ಪ್ರಧಾನ. ಜನಸಂಖ್ಯೆಯಲ್ಲಿ ಸೇ. 90 ರಷ್ಟು ಮಂದಿ ಬೌದ್ಧರು. ಕೆಲವು ಕಡೆ ಸರ್ವಚೇತನ ಪಂಥ ಮತ್ತು ಭೂತಗಳಲ್ಲಿ ನಂಬಿಕೆ ಈಗಲೂ ಇದೆ. ದಕ್ಷಿಣದಲ್ಲಿ ಮಲಯ ಮುಸಲ್ಮಾನರ ಸಂಖ್ಯೆ ಹೆಚ್ಚು. ಕ್ರೈಸ್ತರು ಅಲ್ಪಸಂಖ್ಯಾತರು; ಅವರ ವಾಸ ಹೆಚ್ಚಾಗಿ ಬ್ಯಾಂಗ್‍ಕಾಕ್ ಮತ್ತು ರಾಜ್ಯದ ಉತ್ತರ ಭಾಗ. ಅವರಲ್ಲಿ ರೋಮನ್ ಕ್ಯಾತೋಲಿಕ್ ಕ್ರೈಸ್ತರೇ ಹೆಚ್ಚು. ಥೈಲೆಂಡಿನಲ್ಲಿರುವ ಚೀನೀಯರು ಕಾನ್‍ಪ್ಯೂಷಿಯಸ್ ಧರ್ಮವನ್ನನುಸರಿಸುತ್ತಾರೆ. ಸು. 4,000 ಹಿಂದೂ ಕುಟುಂಬಗಳು ಥೈಲೆಂಡಿನಲ್ಲಿವೆ (1974). ಅರಮನೆಯಲ್ಲಿ ಧಾರ್ಮಿಕ ವಿಧಿಗಳಲ್ಲಿ ಭಾರತೀಯ ಪುರೋಹಿತರ ಪಾತ್ರ ಪ್ರಧಾನ; ಇಲ್ಲಿ ಹಿಂದೂ ಧಾರ್ಮಿಕ ವಿಧಿಗಳು ಬೌದ್ಧ ಜೋತಿಷ್ಯದಲ್ಲಿ ಹಾಸುಹೊಕ್ಕಾಗಿವೆ. ಹಿಂದೂ ಪುರೋಹಿತರು ಜೋತಿಷ್ಯದಲ್ಲಿ ನಿಪುಣರು. ರಾಷ್ಟ್ರ ಪಂಚಾಗವನ್ನು ರಚಿಸುತ್ತಾರೆ.

ಸಂವಿಧಾನ ಮತ್ತು ಆಡಳಿತ

ಸಂವಿಧಾನ: 1974 ರ ಸಂವಿಧಾನದ ಪ್ರಕಾರ ಥೈಲೆಂಡಿನದು ಸಂವಿಧಾನಾತ್ಮಕ ರಾಜಪ್ರಭುತ್ವ. ದೊರೆ ರಾಷ್ಟ್ರದ ಹಾಗೂ ಪ್ರಧಾನ ದಂಡನಾಯಕ. ಆತನದು ಬೌದ್ಧಮತ; ಅದು ರಾಷ್ಟ್ರೀಯ ಮತ ಕೂಡ. ದೊರೆ ಆ ಮತದ ರಕ್ಷಕ. ಮಂತ್ರಿ ಸಂಪುಟದ ಮೂಲಕ ಅವನು ಆಡಳಿತಾಧಿಕಾರಗಳನ್ನು, ಸಂಸತ್ತಿನ ಮೂಲಕ ಶಾಸನರಚನಾಧಿಕಾರಗಳನ್ನು, ನ್ಯಾಯಾಲಯಗಳ ಮೂಲಕ ನ್ಯಾಯಾಧಿಕಾರವನ್ನು ಚಲಾಯಿಸುತ್ತಾನೆ. ತನಗೆ ಸಲಹೆ ನೀಡಲು ಅವನು ನೇಮಿಸುವ ಮಂತ್ರಲೋಚನ ಪರಿಷತ್ತಿನಲ್ಲಿ (ಪ್ರಿವಿಕೌನ್ಸಿಲ್) ಒಬ್ಬ ಅಧ್ಯಕ್ಷ ಹಾಗೂ 14 ಕ್ಕೆ ಮೀರದ ಸಂಖ್ಯೆಯ ಸದಸ್ಯರಿರುತ್ತಾರೆ. ರಾಜನ ಅಧಿಕಾರಗಳು ಸಂವಿಧಾನದಿಂದ ನಿಯಂತ್ರಿತ.

ಸಚಿವ ಸಂಪುಟದ ಅಧ್ಯಕ್ಷತೆ ಪ್ರಧಾನ ಮಂತ್ರಿಯದು. 30 ಕ್ಕೆ ಹೆಚ್ಚಿಲ್ಲದ ಸಂಖ್ಯೆಯ ಮಂತ್ರಿಗಳಿರುತ್ತಾರೆ. ಇವರನ್ನು ರಾಜ ನೇಮಿಸುತ್ತಾನೆ. ಪ್ರಧಾನ ಸಂಪುಟದಲ್ಲಿ ಅರ್ಧಕ್ಕೆ ಕಡಿಮೆಯಿಲ್ಲದಷ್ಟು ಸಂಖ್ಯೆ ಮಂತ್ರಿಗಳು ಸಂಸತ್ತಿನ ಸದಸ್ಯರಾಗಿರಬೇಕು. ಸಂಸತ್ತು ಅವಿಶ್ವಾಸ ನಿರ್ಣಯವನ್ನು ತಂದು ಸಚಿವ ಸಂಪುಟವನ್ನು ರದ್ದು ಮಾಡಬಹುದು.

ಥೈಲೆಂಡಿನ ಸಂಸತ್ತಾದ ರಾಷ್ಟ್ರೀಯ ಸಭೆಯಲ್ಲಿ ಎರಡು ಸದನಗಳಿವೆ. ಸೆನೆಟ್ ಮೇಲ್ಮನೆ; ಪ್ರತಿನಿಧಿ ಸಭೆ ಕೆಳಮನೆ.
ರಾಷ್ಟ್ರೀಯ ಸಭೆಯ ಅಧ್ಯಕ್ಷ ಸ್ಥಾನವನ್ನು ಪ್ರತಿನಿಧಿ ಸಭಾಪತಿ ವಹಿಸುತ್ತಾನೆ. ಆದ ಉಪಾಧ್ಯಕ್ಷಸ್ಥಾನವನ್ನು ಸೆನೆಟ್ ಸಭೆಯ ಅಧ್ಯಕ್ಷ ವಹಿಸುತ್ತಾನೆ. ವಿಧೇಯಕಗಳು ರಾಷ್ಟ್ರೀಯ ಸಭೆಯ ಉಭಯಸದನಗಳಿಂದಲೂ ಅಂಗೀಕೃತವಾದ ಮೇಲೆ ಅವಕ್ಕೆ ರಾಜನ ಸಹಿ ಬೀಳುತ್ತದೆ. ರಾಷ್ಟ್ರೀಯ ಸಭೆ ವರ್ಷದಲ್ಲಿ ಒಂದು ಅಥವಾ ಎರಡು ಅಧಿವೇಶನಗಳನ್ನು ನಡೆಸುವುದು. ಅಧಿವೇಶನದ ಅವಧಿ 90 ದಿನಗಳು. ಸೆನೆಟ್‍ನ ಸದಸ್ಯ ಸಂಖ್ಯ 100. ಸದಸ್ಯರನ್ನು ರಾಜ ನೇಮಿಸುತ್ತಾನೆ. ಅವರ ಅದಿಕಾರವಧಿ 6 ವರ್ಷ. ಮಂತ್ರಾಲೋಚಾನ ಪರಿಷತ್ತಿನ ಅಧ್ಯಕ್ಷ ಅವರ ನೇಮಕಗಳನ್ನು ಅನುಮೋದಿಸುತ್ತಾನೆ. ಸದಸ್ಯನಾಗಲು ಕನಿಷ್ಠ ವಯಸ್ಸು 35. ಸೆನೆಟ್ ಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಂಸತ್ತಿನ ಸದಸ್ಯರ ನಿರ್ಣಯದ ಪ್ರಕಾರ ರಾಜ ನೇಮಿಸುತ್ತಾನೆ.
ಪ್ರತಿನಿಧಿ ಸಭೆಯ ಸದಸ್ಯರು 269 ಮಂದಿ; ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಆಯ್ಕೆಯಾಗುತ್ತಾರೆ. ಅವರ ಅಧಿಕಾರವಧಿ 4 ವರ್ಷ, ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಲ್ಲಲು ಅಗತ್ಯವಾದ ಕನಿಷ್ಠ ವಯಸ್ಸು 25, ಸದಸ್ಯ ಒಂದು ರಾಜಕೀಯ ಪಕ್ಷಕ್ಕೆ ಸೇರಿದವನಾಗಿರಬೇಕು. ಪ್ರತಿನಿಧಿ ಸಭೆಯನ್ನು ದೊರೆರದ್ದು ಮಾಡಬಹುದು. ಅಂಥ ಸಂದರ್ಭದಲ್ಲಿ ಹೊಸ ಚುನಾವಣೆ 90 ದಿನಗಳೊಳಗೆ ನಡೆಯಬೇಕು. ಇದರ ಸಭಾಪತಿ ಮತ್ತು ಉಪಸಭಾಪತಿಯನ್ನು ಸಂಸತ್ತಿನ ಸದಸ್ಯರ ನಿರ್ಣಯದ ಪ್ರಕಾರ ರಾಜ ನೇಮಿಸುತ್ತಾನೆ.

ಶಾಸನ ನ್ಯಾಯಾಧಿಕರಣದಲ್ಲಿ (ಟ್ರಿಬ್ಯೂನಲ್) 9 ನ್ಯಾಯಾಧೀಶರಿರುತ್ತಾರೆ. ಅವರಲ್ಲಿ ತಲಾ ಮೂರು ಮಂದಿ ರಾಷ್ಟ್ರಿಯ ಸಭೆಯಿಂದಲೂ ಸಚಿವ ಸಂಪುಟದಿಂದಲೂ ನ್ಯಾಯಾಸಮಿತಿಯಿಂದಲೂ ನೇಮಕವಾಗುತ್ತಾರೆ. ಶಾಸನ ನ್ಯಾಯಾಧಿಕರಣದ ಸದಸ್ಯರು ಪ್ರತಿನಿಧಿಗಳ ಸಭೆಯ ಚುನಾವಣೆ ನಡೆದ 60 ದಿನಗಳೊಳಗೆ ನೇಮಕಗೊಂಡು ಮುಂದಿನ ಸಾರ್ವತ್ರಿಕ ಚುನಾವಣೆಯ ತರುವಾಯ ಅಧಿಕಾರವನ್ನು ತ್ಯಜಿಸುತ್ತಾರೆ. ಸಂಸತ್ತಿನ ಮುಂದಿರುವ ಮಸೂದೆಗಳ ನ್ಯಾಯಾಂಶಗಳನ್ನು ಹಾಗೂ ಸಿಂದುತ್ವವನ್ನು ನಿರ್ಣಯಿಸುವ ಅಧಿಕಾರ ಇದರದು.

1976ರ ಅಕ್ಟೋಬರ್‍ನಲ್ಲಿ ನಡೆದ ಕ್ಷಿಪ್ರಕ್ರಾಂತಿಯ ಫಲವಾಗಿ ಬಂದ ಹೊಸ ಸರ್ಕಾರಕ್ಕೆ ಸರ್ವಾಧಿಕಾರ ನೀಡುವ ಸಂವಿಧಾನ ಜಾರಿಗೆ ಬಂತು. ರಾಷ್ಟ್ರೀಯ ಆಡಳಿತ ಸುಧಾರಣಾ ಸಭೆಯೊಂದು ಅಸ್ತಿತ್ವಕ್ಕೆ ಬಂದಿದೆ. ಇದರದು ನಾಲ್ಕು ವರ್ಷಗಳ ಅವಧಿ. ಈ ಸಭೆಗೆ ಚುನಾವಣೆ ನಡೆಸುವಂತೆ ಸಂವಿಧಾನದಲ್ಲಿ ಸೂಕ್ತ ಬದಲಾವಣೆ ಮಾಡಲಾಗುತ್ತದೆ.

ಆಡಳಿತ: ಆಡಳಿತಕ್ಕಾಗಿ ದೇಶವನ್ನು 70 ಪ್ರಾಂತ್ಯಗಳಾಗಿ (ಚಂಗ್‍ವಟ್) ವಿಭಜಿಸಲಾಗಿದೆ. ಪ್ರತಿ ಪ್ರಾಂತ್ಯದಲ್ಲೂ ಜಿಲ್ಲೆಗಳು. ಕಮ್ಯೂನ್‍ಗಳು ಹಾಗೂ ಗ್ರಾಮಗಳಿವೆ.

ನ್ಯಾಯವ್ಯವಸ್ಥೆ: ಥೈ ಕಾನೂನು ಭಾರತೀಯ ಮನುಸಂಹಿತೆಯಿಂದ ಪ್ರಭಾವಿತವಾದ್ದು. ಥೈಲೆಂಡ್‍ನ ಮಧ್ಯಭಾಗದಲ್ಲಿದ್ದ ಪ್ರಾಚೀನ ಮೋನ್ ರಾಜ್ಯದಿಂದ ಹಿಂದೂ ಧರ್ಮಶಾಸ್ತ್ರ ಇಲ್ಲಿ ಪ್ರಚುರವಾಯಿತು. 19ನೆಯ ಶತಮಾನದಲ್ಲಿ ರಾಜಕೀಯ ಸುಧಾರಣೆಗಳಾದಾಗ ಪಾಶ್ಚಾತ್ಯ ನ್ಯಾಯಾಡಳಿತ ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು.

ನ್ಯಾಯಾಧೀಶರನ್ನು ನ್ಯಾಯಸಮಿತಿಯ ಸಲಹೆ ಪಡೆದು ನೇಮಿಸಬಹುದು ಹಾಗೂ ಕೆಲಸದಿಂದ ತೆಗದುಹಾಕಬಹುದು. ನ್ಯಾಯಸಮಿತಿಯಲ್ಲಿ ಪರಮೋಚ್ಛ ನ್ಯಾಯಾಲಯದ ಅಧ್ಯಕ್ಷ, 3 ಮಂದಿ ಪದನಿಮಿತ್ತ ಸದಸ್ಯರು. ಹಾಗೂ ನ್ಯಾಯ ವ್ಯಾಸಂಗ ಮಾಡಿ ಅರ್ಹತೆ ಪಡೆದ 8 ಸದಸ್ಯರು ಇರುತ್ತಾರೆ.

ಸಿವಿಲ್, ಕ್ರಿಮಿನಲ್ ಮತ್ತು ದಿವಾಳಿತನದ ಮೊಕದ್ದಮೆಗಳ ಆಖೈರು ತೀರ್ಪು ಪರಮೋಚ್ಛ ನ್ಯಾಯಾಲಯದ್ದು. ಇದರ ಕೆಳಗಿನದು ಅಪೀಲು ನ್ಯಾಯಾಲಯ. ಇದಕ್ಕೆ ಸಿವಿಲ್. ಕ್ರಿಮಿನಲ್ ಮತ್ತು ದಿವಾಳಿ ಮೊಕದ್ದಮೆಗಳನ್ನು ವಿಚಾರಣೆ ಮಾಡುವ ಅಧಿಕಾರವಿರುತ್ತದೆ. ಮೊಕ್ಕದ್ದಮೆಗಳನ್ನು ಪ್ರಥಮವಾಗಿ ವಿಚಾರಿಸುವ ನ್ಯಾಯಾಲಯಗಳ ತೀರ್ಪುಗಳ ಮೇಲೆ ಅಪೀಲುಗಳು ಈ ನ್ಯಾಯಾಲಯಕ್ಕೆ ಬರುತ್ತವೆ. ಪ್ರಾಂತೀಯ ನ್ಯಾಯಾಲಯಕ್ಕೆ ಸಿವಿಲ್ ಮತ್ತು ಮಿಲಿಟರಿ ವಿಚಾರಗಳ ಬಗ್ಗೆ ಅಪರಿಮಿತ ಮೂಲ ಅಧಿಕಾರವಿದೆ. ಕ್ರಿಮಿನಲ್ ನ್ಯಾಯಾಲಯಗಳು ಬ್ಯಾಂಗ್‍ಕಾಕ್ ಮತ್ತು ತನ್‍ಬರೀ ನಗರಗಳಲ್ಲಿವೆ. ಅವಕ್ಕೆ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಯ ಬಗ್ಗೆ ಮೂಲ ಅಧಿಕಾರವಿದೆ. ಸಿವಿಲ್ ನ್ಯಾಯಾಲಯಗಳು ಸಿವಿಲ್ ಮತ್ತು ದಿವಾಳಿ ಮೊಕದ್ದಮೆಗಳ ವಿಚಾರಣೆಯಲ್ಲಿ ಮೂಲ ಅಧಿಕಾರ ಚಲಾಯಿಸುತ್ತವೆ. ಇವು ಬ್ಯಾಂಗ್‍ಕಾಕ್ ಮತ್ತು ತನ್‍ಬರೀ ನಗರಗಳಲ್ಲಿವೆ. ಇವಲ್ಲದೆ ಬಾಲಾಪರಾಧ ವಿಚಾರಣಾ ನ್ಯಾಯಾಲಯಗಳಿವೆ. ದಂಡಾಧಿಕಾರಿ ನ್ಯಾಯಾಲಯಗಳೂ ಉಂಟು.

ಆರ್ಥಿಕತೆ

ವ್ಯವಸಾಯ: ರಾಷ್ಟ್ರದ ಉತ್ಪನ್ನದಲ್ಲಿ ವ್ಯವಸಾಯ ಭಾಗ, ಸೇ. 30 ಇಲ್ಲಿಯ ಭೂಮಿಯಲ್ಲಿ 1/4 ಭಾಗ ವ್ಯವಸಾಯಕ್ಕೆ ಒದಗಿದೆ. ಜನಸಂಖ್ಯೆಯ 3/4 ಭಾಗ ವ್ಯವಸಾಯವೇ ಕಸುಬು. ಇಲ್ಲಿಯ ಮುಖ್ಯ ಬೆಳೆಗಳು ಬತ್ತ, ಮಸುಕಿನ ಜೋಳ, ನೆಲಗಡಲೆ, ಸೋಯಬೀನ್ಸ್, ಚಹ, ರಬ್ಬರ್, ಸಣಬು ಸುವರ್ಣಗೆಡ್ಡೆ ಪ್ರಪಂಚದ ಪ್ರಮುಖ ಅಕ್ಕಿ ರಫ್ತುದಾರ ದೇಶಗಳಲ್ಲಿ ಥೈಲೆಂಡ್ ಒಂದು. ಇಲ್ಲಿ ಉತ್ತಮ ಜಾನುವಾರು ಹಾಗೂ ಹಂದಿಗಳನ್ನು ಸಾಕುತ್ತಾರೆ.

ಅರಣ್ಯಗಾರಿಕೆ: ಚೌಬೀನೆಗೆ ಯೋಗ್ಯವಾದ ಗಟ್ಟಿಮರಗಳು ಅರಣ್ಯಗಳಲ್ಲಿವೆ. ಚೌಬೀನೆಯಿಂದ ಅಧಿಕ ಲಾಭ ದೊರಕುತ್ತದೆ. ಅರಣ್ಯಗಳಳ್ಲಿ ರಬ್ಬರ್ ಮರಗಳ ಬೆಳೆ 19 ನೆಯ ಶತಮಾನದಲ್ಲಿ ಆರಂಭವಾಯಿತು. ರಬ್ಬರ್ ಪ್ಲಾಂಟೇಷನ್‍ಗಳು ಹೆಚ್ಚಾಗಿವೆ. 1973 ರಲ್ಲಿ 1,88,400 ಘಮೀ. ತೇಗವೂ 20,01,200 ಘ.ಮೀ ಇತರ ಮರಗಳೂ ಉತ್ಪಾದನೆಯಾದುವು.
ಮೀನುಗಾರಿಕೆ: ರಾಜ್ಯದ ಅರ್ಥಿಕ ಮುನ್ನಡೆಯಲ್ಲಿ ಮೀನುಗಾರಿಕೆಯೂ ಪ್ರಧಾನ. 1974 ರಲ್ಲಿ 1,538 ಮೆಟ್ರಿಕ್ ಕಡಲಮೀನುಗಳನ್ನೂ 140 ಮೆಟ್ರಿಕ್ ಟನ್ ಒಳನಾಡ ಮೀನುಗಳನ್ನೂ ಹಿಡಿಯಲಾಯಿತು. 

ಖನಿಜಗಳೂ: ಥೈಲೆಂಡಿನಲ್ಲಿ ಹೆಚ್ಚಾಗಿ ಸಿಗುವ ಖನಿಜ ತವರ; ಪರ್ಯಾಯ ದ್ವೀಪ ಭಾಗದಲ್ಲಿ ಸುಮಾರು 650 ತವರದ ಗಣಿಗಳಿವೆ. ಪ್ರಪಂಚದ ತವರದ ಉತ್ಪಾದನೆಯಲ್ಲಿ ಥೈಲೆಂಡ್ 3 ನೆಯ ಧೇಶ. ಇಲ್ಲಿ ದೊರಕುವ ಇತರ ಖನಿಜಗಳು ಟಂಗ್‍ಸ್ಟನ್ ಕಬ್ಬಿಣ ಅದಿರು, ಸೀಸ, ಅಂಟಿಮೋನಿ.

ಕೈಗಾರಿಕೆ ಪ್ರಮುಖ ನಗರಗಳಲ್ಲಿ ಜವಳಿ ಗಿರಣಿಗಳಿವೆ. ಗಾಜು, ಸಿಮೆಂಟ್, ಸಕ್ಕರೆ, ಚೌಬಿನೆ, ಕಾರ್ಖಾನೆಗಳಿವೆ. ಬ್ಯಾಂಗ್‍ಕಾಕ್, ತನ್‍ಬರೀ ಪ್ರಮುಖ ಕೈಗಾರಿಕಾ ಕೇಂದ್ರಗಳು. ದೇಶದ ಆಗ್ನೇಯ ಭಾಗದಲ್ಲಿ ಮೀನು ಮತ್ತು ಆಹಾರಗಳ ಡಬ್ಬೀಕರಣ ಕಾರ್ಖಾನೆಗಳೂ ಪೆಟ್ರೋಲ್ ಪರಿಷ್ಕರಣ ಉದ್ಯಮಗಳೂ ವಜ್ರ ಕೆತ್ತನೆ ಉದ್ಯಮಗಳೂ ಇವೆ.

ಹಣ ವ್ಯವಸ್ಥೆ: ಥೈಲೆಂಡಿನ ನಾಣ್ಯ ಬಾಹ್ಟ್. ಇದನ್ನು 100 ಸಟಾಂಗ್‍ಗಳಾಗಿ ವಿಂಗಡಿಸಲಾಗಿದೆ. 1/2, 5, 10, 20, 25 ಮತ್ತು 50 ಸಟಾಂಗ್‍ಗಳ ಮತ್ತು 1 ಬಾಹ್ಟ್‍ನ ನಾಣ್ಯಗಳೂ 50 ಸೆಟಾಂಗ್ ಮತ್ತು 1, 5, 10, 20, 100, 500 ಬಾಹ್ಟ್ ನೋಟುಗಳು ಚಲಾವಣೆಯಲ್ಲಿವೆ. ಬ್ಯಾಂಕ್ ಆಫ್ ಥೈಲೆಂಡ್ 1942 ರಲ್ಲಿ ಸ್ಥಾಪಿತವಾಯಿತು. ಇದು ದೇಶದ ಕೇಂದ್ರೀಯ ಬ್ಯಾಂಕು.

ಸಾರಿಗೆ: 1973 ರಲ್ಲಿ 8,207 ಕಿಮೀ. ರೈಲುಮಾರ್ಗಗಳಿದ್ದುವು. ಬ್ಯಾಂಗ್‍ಕಾಕ್‍ನಿಂದ ದೇಶದ ನಾನಾ ಕಡೆಗಳಿವೆ ರೈಲುಮಾರ್ಗಗಳಿವೆ. ಕಾಂಬೋಡಿಯ ರೈಲುಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುವ ಒಂದು ಮಾರ್ಗವೂ ಇದೆ. ರಸ್ತೆಗಳ ಉದ್ದ 17,000 ಕಿಮೀ. ಕೆಲವು ರಸ್ತೆಗಳು ವರ್ಷವಿಡೀ ಸಂಚಾರಕ್ಕೆ ಅನುಕೂಲವಾಗಿರುವುದಿಲ್ಲ. ಒಳನಾಡಿನಲ್ಲಿ ಹಾಗೂ ಪರ್ವತ ಪ್ರದೇಶಗಳಲ್ಲಿ ಕಾಲುದಾರಿಗಳಿವೆ. ರಸ್ತೆಗಳಿಲ್ಲದ ಕಡೆ ವಿಮಾನ, ಹೆಲಿಕಾಪ್ಟರ್ ಸಂಚಾರವಿದೆ. ಬ್ಯಾಂಗ್‍ಕಾಕ್ ಆಗ್ನೇಯ ಏಷ್ಯದ ಜಲಮಾರ್ಗದ ಹಾಗೂ ವಾಯುಮಾರ್ಗದ ಮುಖ್ಯ ಕೇಂದ್ರ. ಲಾವೋಸ್‍ನ ಸರಕುಗಳೂ ಈ ರೇವಿನ ಮೂಲಕ ಸಾಗುತ್ತವೆ. ನದಿಗಳ ಮೇಲೆ ಪೂರ್ವಕಾಲದಿಂದಲೂ ನೌಕಾಯಾನವಿದೆ. ಬ್ಯಾಂಗ್‍ಕಾಕ್ ನಗರದ ಉತ್ತರದಲ್ಲಿರುವ ದೊನ್ ಮ ಅಂಗ್ ವಿಮಾನ ನಿಲ್ದಾಣಕ್ಕೆ 28 ಅಂತರರಾಷ್ಟ್ರೀಯ ವಿಮಾನ ಸಂಸ್ಥೆಗಳ ವಿಮಾನಗಳು ಬಂದು ಹೋಗುತ್ತವೆ ಇದಲ್ಲದೆ ದೇಶದಲ್ಲಿ 20 ಸಣ್ಣ ವಿಮಾನ ನಿಲ್ದಾಣಗಳಿವೆ. ನೊಂಗ್ - ಗು - ಹವೊ ಬಳಿ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿತವಾಗಿದೆ.
ಥೈಲೆಂಡಿನ ಪ್ರಮುಖ ನಗರಗಳು ಇವು: ಬ್ಯಾಂಗ್‍ಕಾಕ್ 5876000 (2000). ತನ್‍ಬುರೀ, ಜೀಯಾಂಗ್ ಮತ್ತು ನಾಕಾನ್ ರಾಚಾಸಿಮಾ.							
	(ವಿ.ಜಿ.ಕೆ.)

ಇತಿಹಾಸ

ಪ್ರಾಗಿತಿಹಾಸ: ಥೈಲೆಂಡಿನ ಪಶ್ಚಿಮ ಮಧ್ಯ ಪ್ಲೀಸ್ಟೋಸೀನ್ ಯುಗದಲ್ಲಿ ನೆರೆಯ ಪ್ರದೇಶವಾದ ಮೈನ್‍ಮಾರ್‍ನಲ್ಲಿ ಪ್ರಸಾರದಲ್ಲಿದ್ದ ಅನ್ಯಾಥಿಯನ್ ಪೂರ್ವಶಿಲಾಯುದ ಸಂಸ್ಕøತಿಗೆ ಸೇರಿದ ಕಲ್ಲುಮಚ್ಚು. ಮಚ್ಚು ಕೊಡಲು ಮತ್ತು ಚಕ್ಕೆಕಲ್ಲಿನ ಆಯುಧಗಳು ಬಳಕೆಯಲ್ಲಿದ್ದುವು. ಹಲವಾರು ನೆಲೆಗಳಲ್ಲಿ ಈ ರೀತಿಯ ಆಯುಧೋಪಕರಣಗಳು ದೊರಕಿರುವುದರಿಂದ ಅ ಪ್ರದೇಶದಲ್ಲಿ ಆದಿಮಾನವ ವಾಸಿಸುತ್ತಿದ್ದ ಸಂಗತಿ ಖಚಿತಗೊಳ್ಳುತ್ತವೆ. ಥೈಲೆಂಡಿನ ಈ ಪೂರ್ವಶಿಲಾಯುಗ ಸಂಸ್ಕøತಿಯನ್ನು ಫಿಂಗೋನಿಯನ್ ಸಂಸ್ಕøತಿ ಎಂದು ಕರೆಯಲಾಗಿದೆ. ಬಹುಶಃ ಈಚಿನವರೆಗೂ ಈ ಸಂಸ್ಕøತಿ ಉಳಿದುಬಂದಂತೆ ತಿಳಿದು ಬರುತ್ತದೆ.

ಕ್ರಿ.ಪೂ. 3 - 2 ನೆಯ ಸಹಸ್ರಮಾನಕ್ಕೆ ನಿರ್ದೇಶಿಸಬಹುದಾದ ಹೋಬಿನಿಯಾನ್ ಮತ್ತು ಚ್ಯಾಕ್ಸೋನಿಯನ್ ಸಂಸ್ಕøತಿಗಳು ಈ ಪ್ರದೇಶದಲ್ಲಿ ಕಂಡುಬಂದಿದೆ. ಅವು ಬಹುಮಟ್ಟಿಗೆ ಸಮಕಾಲೀನವಾದವು. ಅವುಗಳಲ್ಲಿ ಪೂರ್ವಶಿಲಾಯುಗ ಪದ್ಧತಿಯ ವಿಧಾನಗಳಲ್ಲಿ ತಯಾರಿಸಲಾದ ಚಕ್ಕೆಕಲ್ಲಿನ ಅಯುಧಗಳೂ ಭಾರವಾದ ಕೈಗೊಡಲಿ ಕೊಡಲಿಗಳೂ ಉಪಯೋಗದಲ್ಲಿದ್ದುವು. ಜನರ ಅವುಗಳ ಸಹಾಯದಿಂದ ಪ್ರಾಣಿಗಳ ಬೇಟೆ, ಸಸ್ಯಮೂಲ ಅಹಾರ ಸಂಗ್ರಹಣೆ ಮುಂತಾದ ಕಸುಬುಗಳಲ್ಲಿ ತೊಡಗಿರುತ್ತಿದ್ದರು. ಬಹುಶಃ ಆ ಕಾಲದಲ್ಲೇ ಬತ್ತದ ಬೇಸಾಯ ಆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದಿರಬೇಕು. ಮೀನು, ಆಮೆ, ಮುಂತಾದ ಚಲಚರಗಳನ್ನು ಆಹಾರಕ್ಕಾಗಿ ಬಳಸುತ್ತಿದ್ದರು. ದೈಹಿಕವಾಗಿ ಆ ಜನರು ಈಗಿನ ಮಲನೇಷ್ಯ ಮತ್ತು ಪಾಪ್ಯವದ ಜನರನ್ನು ಹೋಲುತ್ತಿದ್ದುದಾಗಿ ಅವರ ಅಸ್ಥಿಗಳನ್ನು ಅವಶೇಷಗಳಿಂದ ತಿಳಿದುಬಂದಿದೆ.

ನವಶಿಲಾಯುಗ ಮತ್ತು ಕಂಚಿನ ಯುಗಗಳಿಗೆ ನಿರ್ದೇಶಿಸಬಹುದಾದ ಡಾಂಗ್ ಸನ್ ಸಂಸ್ಕøತಿಯ ಅವಶೇಷಗಳು ಪಶ್ಚಿಮ - ಥೈಲೆಂಡಿನಲ್ಲಿ ದೊರಕಿವೆ. ದಕ್ಷಿಣ ಚೀನದ ಸಂಸ್ಕøತಿಯ ಪ್ರಭಾವದಿಂದ ಹುಟ್ಟಿದ ಈ ಸಂಸ್ಕøತಿಯ ಕಾಲದಲ್ಲಿ ಕಂಚಿನಲ್ಲಿ ಮಾಡಿದ ಆಯುಧೋಪಕರಣಗಳು ಕ್ರಮೇಣ ಬಳಕೆಗೆ ಬಂದುವು. ಅಂಥ ಆಯುಧಗಳ ಬಳಕೆ ಕ್ರಿಸ್ತಶಕದ ಆರಂಭಕಾಲದವರೆಗೆ ಮುಂದುವರಿದುದಾಗಿ ತಿಳಿದುಬರುತ್ತದೆ. ಆ ಆಯುಧಗಳಲ್ಲಿ ಸೀಸಮಿಶ್ರಿತ ಕಂಚಿನಲ್ಲಿ ಮಾಡಿದ ಬಾಕುಗಳು. ಹಿಡಿಕೆ ರಂಧ್ರವಿದ್ದ ಕೊಡಲಿಗಳು, ಸಲಿಕೆಗುದ್ದಲಿಗಳು ಮತ್ತು ಭರ್ಜಿಮೊನೆಗಳು ಮುಖ್ಯವಾದವು. ಭವಿಷ್ಯ ಹೇಳಲೂ, ಭೂತಗಳನ್ನು ಆಹ್ವಾನಿಸುವುದು, ಮಳೆ ಬರುವಂತೆ ಮಾಡುವುದು, ಶತ್ರುಗಳಿಗೆ ಮಾಟ ಮಾಡುವುದು ಮುಂತಾದ ಮಾಂತ್ರಿಕ ವಿದ್ಯೆಗಳಲ್ಲೂ ಮೈನ್‍ಮಾರ್‍ದ ಕೆರನ್ ಬುಡಕಟ್ಟಿನ ಜನರು ಇತ್ತೀಚಿನ ವರೆಗೂ ಬಳಸುತ್ತಿದ್ದ ಕಂಚಿನ ಬರುಟೆಮದ್ದಲೆಗಳು (ಕೆಟಲ್-ಡ್ರಮ್) ಆ ಸಂಸ್ಕøತಿಯ ಮತ್ತೊಂದು ವೈಶಿಷ್ಟ್ಯ. ಆ ಬುರುಡೆಮದ್ದಲೆಗಳ ಮೇಲೆ ಕೆತ್ತಿರುವ ಚೀನೀಚೌ ವಂಶದ ಕಾಲದ ಪೋಷಾಕುಗಳನ್ನು ತೊಟ್ಟ ಕುದುರೆಸವಾರರ ದೃಶ್ಯಗಳಿಂದ ಆ ಸಂಸ್ಕøತಿಯ ಮೂಲವನ್ನು ಸುಲಭವಾಗಿ ನಿರ್ಧರಿಸಬಹುದು. ಕ್ರಿಸ್ತಶಕದ ಮೊದಲ ಕೆಲವು ಶತಮಾನಗಳಲ್ಲಿ ಭಾರತೀಯ ವರ್ತಕರು ಕಬ್ಬಿಣದ ಆಯುಧೋಪಕರಣಗಳ ಉಪಯೋಗ ಮತ್ತು ನಾಗರೀಕತೆಯ ಪ್ರಭಾವಗಳನ್ನು ಅಲ್ಲಿಯ ಜನರಿಗೆ ಪರಿಚಯ ಮಾಡಿಕೊಡುವ ವರೆಗೂ ಅದೇ ಸಂಸ್ಕøತಿ ಮುಂದುವರಿಯಿತು. 							
	(ಬಿ.ಕೆ.ಜಿ.) 

ಇತಿಹಾಸ: ರಾಜ್ಯಕ್ಕೆ ಹಿಂದೆ ಥೈಲಾಂಡ್ ಎಂಬ ಹೆಸರಿತ್ತು. 1939ರಲ್ಲಿ ಥೈಲೆಂಡ್ ಅಥವಾ ಥೈಮು-ಅಂಗ್ ಥೈ ಎಂಬ ಹೆಸರಾಯಿತು. ಥೈಲೆಂಡ್ ಎಂದರೆ ಸ್ವತಂತ್ರ ಜನರ ನಾಡು. ಹಿಂದೆ ಇದ್ದ ನಿರಂಕುಶ ಪ್ರಭುತ್ವ ಹೋಗಿ ಈಗ ಸಂವಿಧಾನಾತ್ಮಕ ಅರಸರ ಆಳ್ವಿಕೆ ಸ್ಥಾಪಿತವಾಗಿದೆ.

ಥೈಜನರ ಇತಿಹಾಸ ಕ್ರಿ.ಶ.ಸು. 10ನೆಯ ಶತಮಾನದಿಂದ ಪ್ರಾರಂಭವಾಗುತ್ತದೆ. ಈ ಜನ ಚೀನೀ ಮಹಾ ಬಯಲಿನಿಂದ ಪಶ್ಚಿಮ ಹಾಗೂ ದಕ್ಷಿಣದ ಕಡೆ ಹೊರಟು, ಪಶ್ಚಿಮದ ಅಸ್ಸಾಮ್‍ನಿಂದ ಹಿಡಿದು ಪೂರ್ವಭಾಗದಲ್ಲಿ ಉತ್ತರ ವಿಯೆಟ್ನಾಂ ವರೆಗೆ ವ್ಯಾಪಕವಾಗಿ ನೆಲೆಸಿದರು. ನೆಲೆನಿಂತ ಹೊಸ ಜನ ಸಣ್ಣಪುಟ್ಟ ರಾಜ್ಯಗಳನ್ನು ಕಟ್ಟಿಕೊಳ್ಳುವಷ್ಟು ಸಾಮಾಜಿಕ ಹಾಗೂ ರಾಜಕೀಯ ಅಂತಸ್ತನ್ನು ಮುಟ್ಟಿದ್ದರು. ಈಗಿನ ಉತ್ತರ ಮೈನ್‍ಮಾರ್, ಚೀನದ ಯೂನಾನ್ ಪ್ರಾಂತ್ಯ, ಭಾರತದ ಅಸ್ಸಾಂ ಹಾಗೂ ಥೈಲೆಂಡ್ - ಈ ಪ್ರದೇಶದಲ್ಲಿ ಈ ಜನ 13ನೆಯ ಶತಮಾನದಲ್ಲಿ ಥೈ ರಾಜ್ಯಗಳನ್ನು ಸ್ಥಾಪಿಸಿಕೊಂಡರು. ಕೂಬ್ಲೈಖಾನನ (1216-94) ದಂಡು ಅವರ ಮೇಲೆ ದಂಡೆತ್ತಿ ಬಂದಾಗ, ಅವರು ಮತ್ತಷ್ಟು ದಕ್ಷಿಣಕ್ಕೆ ಇಂಡೋ ಚೀನ ಪರ್ಯಾಯ ದ್ವೀಪದತ್ತ ಸರಿದರು. ಆ ಸಮಯದಲ್ಲಿ ಇಂಡೋ ಚೀನ ಪರ್ಯಾಯ ದ್ವೀಪದ ಮಧ್ಯಭಾಗದಲ್ಲಿ ಪ್ರಧಾನವಾಗಿದ್ದ ಎರಡು ಬುಡಕಟ್ಟುಗಳು ಮೋನ್ ಮತ್ತು ಖ್ಮೇರ್. ಈ ಬುಡಕಟ್ಟುಗಳ ಸಂಸ್ಕøತಿ, ಧರ್ಮ, ರಾಜ್ಯ ಪದ್ಧತಿ, ಕಲೆ ಹಾಗೂ ಸಾಹಿತ್ಯ - ಇವುಗಳಲ್ಲಿ ಭಾರತೀಯ ಛಾಯೆ ಇತ್ತು. ಮೋನ್ ಜನರ ನೆಲೆ ದಕ್ಷಿಣ ಮೈನ್‍ಮಾರ್ ಮತ್ತು ಮಧ್ಯ ಥೈಲೆಂಡ್; ಖ್ಮೆರ್ ಜನರ ವಾಸ ಮೇಕಾಂಗ್ ಕಣಿವೆಯಲ್ಲಿ. 13 ನೆಯ ಶತಮಾನದ ಹೊತ್ತಿಗೆ ಮೋನ್ ಜನರನ್ನು ಖ್ಮೆರ್ ಬಣದ ಜನ ಕುಗ್ಗಿಸಿದ ಕಾರಣ ಹರಿಪುಂಜಯ ಎಂಬ ಸಣ್ಣ ರಾಜ್ಯ ಮಾತ್ರ ಮೋನ್ ಜನರಿಗೆ ಸೇರಿತ್ತು. ಆ ಭಾಗ ಈಗಿನ ಉತ್ತರ ಥೈಲೆಂಡ್. ಖ್ಮೆರ್ ಬಣದವರು ತಮ್ಮ ಅರಸ 7ನೆಯ ಜಯವರ್ಮನ ಕಾಲದಲ್ಲಿ (1181-1219) ರಾಜ್ಯವನ್ನು ವಿಸ್ತರಿಸಿಕೊಂಡಿದ್ದರೂ ಬೇಗ ಕ್ಷೀಣಾವಸ್ಥೆಗೆ ಬಂದರು. ವಲಸೆ ಬಂದ ಥೈ ಜನರು ರಾಜ್ಯ ಕಟ್ಟಿಕೊಂಡು ಪ್ರಾಬಲ್ಯಕ್ಕೆ ಬರಲು ಆ ಕಾಲ ಅನುಕೂಲವಾಗಿತ್ತು.

ಈಗಿನ ಥೈಲೆಂಡ್ ಮಧ್ಯಭಾಗದ ಬಯಲುನಾಡಿನಲ್ಲಿ ಸುಖೊಥೈ ರಾಜ್ಯ 1220ರಲ್ಲೂ ಉತ್ತರದಲ್ಲಿ ಚಿಂಗ್ ಮೈ ರಾಜ್ಯ 1296ರಲ್ಲೂ ಸ್ಥಾಪಿತವಾದವು. ಥೈ ಜನ ಸುಖೊಥೈ ರಾಜ್ಯವೇ ಇತಿಹಾಸ ಯುಗದ ತಮ್ಮ ಪ್ರಪ್ರಥಮ ರಾಜ್ಯವೆಂದು ಪರಿಗಣಿಸಿದ್ದಾರೆ. ಈ ರಾಜ್ಯದ 3ನೆಯ ಅರಸ ರಾಮ್‍ಖಿಮ್‍ಹಯೆಂಗ್ (1279-1317) ಹೊರಡಿಸಿದ ಶಾಸನವೊಂದು ಪ್ರಾರಂಭಕಾಲದ ಥೈ ಭಾಷೆಗೆ ನಿದರ್ಶನ. ಅವನ ಮಗ ಲೊ ಥೈ (1317-47) ಅಸಮರ್ಥ. 1378ರ ಹೊತ್ತಿಗೆ ಈ ರಾಜ್ಯ ದಕ್ಷಿಣದಲ್ಲಿ ಪ್ರಬಲವಾಗುತ್ತಿದ್ದ ಅಯೂದಿಯೂ ರಾಜ್ಯದ ದೆಸೆಯಿಂದ ಕ್ಷೀಣಿಸಿತು.

ಅಯೂದಿಯಾ ರಾಜಸಂತತಿ (1350-1767): ಈ ರಾಜಸಂತತಿಯ ಮೊದಲನೆಯ ಅರಸ 1ನೆಯ ರಾಮತಿಬೋಧಿ. ಈತ ಲಾವೋ ಮತ್ತು ಯುತೊಂಗ್ ರಾಜ್ಯಗಳನ್ನು ಒಟ್ಟುಗೂಡಿಸಿ ಆಳಿದ. ಈ ರಾಜ್ಯ ಜಾವ್ ಫ್ರೈಯ ನದಿಯ ಫಲವತ್ತಾದ ಪ್ರದೇಶದಲ್ಲಿ ಸ್ಥಾಪಿತವಾಗಿದ್ದು ಖ್ಮೆರ್, ಮೋನ್ ಮತ್ತು ಮೈನ್‍ಮಾರ್ ಜನರ ಸಂಸ್ಕøತಿ ಭಾಷೆಗಳ ಪ್ರಭಾವಕ್ಕೆ ಒಳಗಾಗಿತ್ತು. ಸ್ಥಾಪನೆಯ ಕಾಲದಿಂದಲೂ ಇದು ತನ್ನ ನೆರೆಯ ಸುಖೊಥೈ ಹಾಗೂ ಖ್ಮೆರ್ (ಕಾಂಬೋಡಿಯ) ರಾಜ್ಯಗಳೊಡನೆ ಪರಮಾಧಿಕಾರಕ್ಕಾಗಿ ಸ್ಪರ್ಧಿಸಿದಂತೆ ತೋರುತ್ತದೆ. ಇದು ಸುಖೊಥೈ ರಾಜ್ಯವನ್ನು ಆಕ್ರಮಿಸಿದ್ದ ಕಾಂಬೋಡಿಯ ರಾಜ್ಯವನ್ನು 15ನೆಯ ಶತಮಾನದಲ್ಲಿ ಮುರಿಯಿತು. ಸುಖೊಥೈ ತನ್ನ ವಶವಾದ ಮೇಲೆ ಉತ್ತರದ ಥೈ ರಾಜ್ಯಗಳಾದ ಚಂಗ್ ಮೈ ಮತ್ತು ಲಾವೋಸ್‍ಗಳ ದಾಳಿಗಳನ್ನು ಎದುರಿಸಬೇಕಾಯಿತು. ಚಂಗ್ ಮೈ ರಾಜ್ಯ ತನ್ನ ಮೇಲೆ ಬೀಳದಂತೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಅಯೂದಿಯೂ ಅರಸ ತ್ರೈಲೋಕ 1467ರಲ್ಲಿ ತನ್ನ ರಾಜಧಾನಿಯನ್ನು ಉತ್ತರದ ಪಿತ್ಸನುಲೋಕ್ ನಗರಕ್ಕೆ ವರ್ಗಾಯಿಸಿದ. ಅಯೂದಿಯಾ ರಾಜ್ಯ 18ನೆಯ ಶತಮಾನದಲ್ಲಿ ಚಂಗ್ ಮೈ ರಾಜ್ಯವನ್ನು ವಶಪಡಿಸಿಕೊಂಡಿತು.

ಅಯೂದಿಯಾ ಮತ್ತು ಮೈನ್‍ಮಾರ್ ರಾಜ್ಯಗಳ ವೈರ: ಥೈಲೆಂಡಿನ ಪ್ರಬಲ ವೈರಿ ಆಗಿನ ಬರ್ಮವಾಗಿತ್ತು. ಥೈಲೆಂಡ್ ಕಡೆಗೆ ಮೈನ್‍ಮಾರ್ ರಾಜ್ಯ ವಿಸ್ತರಿಸಿಕೊಂಡು 1569ರಲ್ಲಿ ಥೈಲೆಂಡ್ ಪಡೆಯನ್ನು ಸೋಲಿಸಿತು. ಈ ಯುದ್ಧದಲ್ಲಿ ಅಯೂದಿಯಾ ಅರಸ ಮಹಾಚಕ್ರಪತ್ ವಿಪತ್ತಿಗೊಳಗಾದಾಗ ರಾಣಿ ಸೂರ್ಯೋ ಥೈ ಅವನ ಥೈಲೆಂಡ್ ಮೈನ್‍ಮಾರ್‍ದ ಅಧೀನದಲ್ಲಿತ್ತು. ಅರಸು ಮನೆತನದ ನರೇಸುವನ್ ಎಂಬಾತ ಆಗಿನ ಬರ್ಮೀಯರ ವಿರುದ್ಧ ಕ್ರಾಂತಿಯನ್ನೆಬ್ಬಿಸಿ ದೇಶಕ್ಕೆ ಸ್ವಾತಂತ್ರವನ್ನು ತಂದ. ಥೈ ಜನ ಅವನನ್ನು ರಾಷ್ಟ್ರವೀರನೆಂದು ಪರಿಗಣಿಸಿದ್ದಾರೆ. ಮೈನ್‍ಮಾರ್ ಪುನ: ಥೈ ರಾಜಧಾನಿಯ ಮೇಲೆ ದಾಳಿ ನಡೆಸಿ ಅದನ್ನು ಸಂಪೂರ್ಣವಾಗಿ ನಾಶಮಾಡಿತು. (1767). ಹೀಗೆ ಥೈ ಇತಿಹಾಸದಲ್ಲಿ ಅಯೂದಿಯಾ ರಾಜಸಂತತಿ ಕೊನೆಗೊಂಡಿತು. 
ಯೂರೋಪಿಯನ್ನರ ಆಗಮನ : 16ನೆಯ ಶತಮಾನದ ಪ್ರಾರಂಭದಲ್ಲಿ ಪೋರ್ಚುಗೀಸ್ ರಾಯಭಾರಿಗಳು, ವ್ಯಾಪಾರಿಗಳು ಹಾಗೂ ಮತಪ್ರಚಾರಕರು ಥೈಲೆಂಡಿಗೆ ಬಂದರು. ಅಯೂದಿಯೂ ಅರಸರ ಕಾಲದಲ್ಲಿ ಮಲಕ್ಕ ಅವರ ವಶವಾಯಿತು. (1511). 17ನೆಯ ಶತಮಾನದಲ್ಲಿ ಬಂದ ಡಚ್ಚರು ಹಾಗೂ ಇಂಗ್ಲಿಷರು ರಾಜಧಾನಿಯಲ್ಲಿ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಿದರು. ಡಚ್ಚರು ಬಲ ಪ್ರಯೋಗಿಸಿ ವ್ಯಾಪಾರದ ಹಕ್ಕುಗಳನ್ನು ಪಡೆದುಕೊಂಡ ಕಾರಣ ಅವರನ್ನು ದೇಶದಿಂದ ಓಡಿಸಲು ಥೈ ಅರಸ 1660ರಲ್ಲಿ ಫ್ರೆಂಚರನ್ನು ಸ್ವಾಗತಿಸಿದ. ಥೈಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ರಾಯಭಾರ ಸಂಧಾನಗಳು ನಡೆದವು. (1684). ಆದರೆ ಫ್ರೆಂಚರ ರಾಜಕೀಯ ಉದ್ದೇಶಗಳು ಹಾಗೂ ಅವರ ಕುತಂತ್ರ ಬಹಿರಂಗವಾಗಿ, ಬ್ಯಾಂಗ್‍ಕಾಕ್‍ನಲ್ಲಿ ಅವರ ರಾಜಪ್ರತಿನಿಧಿಯನ್ನು ಸೆರೆಹಿಡಿದು ಗಲ್ಲಿಗೇರಿಸಿದರು. ಆ ತರುವಾಯ ಥೈ ಅರಸ ನರೈ (1657-88) ವಿದೇಶೀಯರ ಬಗ್ಗೆ ಎಚ್ಚರದ ನೀತಿಯನ್ನು ವಹಿಸಿದ. ಆ ನೀತಿ 150 ವರ್ಷ ಮುಂದುವರಿಯಿತು.

ತನ್ ಬರೀ ಮತ್ತು ಪ್ರಾರಂಭಿಕ ಬಾನ್‍ಕೋಟ್ ಅರಸರ ಕಾಲ (1767-1868); ಅಯೂದಿಯಾ ರಾಜಸಂತತಿ ಅವನತಿ ಹೊಂದಿದ ಮೇಲೆ ಫ್ರಾಯಾ ತಾಕ್ಸಿನ್ ಎಂಬ ಸೇನಾನಿ ಬರ್ಮೀಯರನ್ನು ರಾಜ್ಯದಿಂದ ಓಡಿಸಿ, ನಾಶಗೊಂಡಿದ್ದ ರಾಜಧಾನಿಯ ದಕ್ಷಿಣಕ್ಕೆ ಸುಮಾರು 40 ಮೈಲಿ ದೂರದಲ್ಲಿ, ಚಾವ್‍ಫ್ರೈಯ ನದಿಯ ದಂಡೆಯ ಮೇಲೆ, ತನ್ ಬರೀ ಬಳಿ ಹೊಸ ರಾಜಧಾನಿಯನ್ನು ನಿರ್ಮಿಸಿ ಆಳತೊಡಗಿದ. ಕೊನೆಕೊನೆಗೆ ಅವನು ಉನ್ಮಾದ ಪಡಿತನಾಗಿ, ತಾನು ಬುದ್ದನ ಅವತಾರವೆಂದು ಹೇಳತೊಡಗಲು, 1781ರಲ್ಲಿ ನಡೆದ ಅರಮನೆಯ ಸಂಚಿನಿಂದ ಅವನು ಪದಚ್ಯುತನಾಗಿ 1782ರಲ್ಲಿ ಮೃತನಾದ. ಅವನ ತರುವಾಯ ಚಕ್ಕೈ ಎಂಬ ಹೊಸ ರಾಜಸಂತತಿ ಥೈಲೆಂಡನ್ನು ಆಳತೊಡಗಿತು. ಈ ಸಂತತಿಯ ಮೊದಲ ಅರಸ ರಾಜಧಾನಿಯನ್ನು ಚಾವ್ ಫ್ರೈಯ ದಂಡೆಯಾಚೆ ಬ್ಯಾಂಗ್‍ಕಾಕ್ ನಗರಕ್ಕೆ ವರ್ಗಾಯಿಸಿದ. 

ತಾಕ್ಸಿನ್ ಮತ್ತು ಅವನ ತರುವಾಯ ಚಕ್ಕೈ ಅರಸರು ರಾಜ್ಯವನ್ನು ಸಂಘಟಿಸಿದರು. ಅವರ ಕಾಲದಲ್ಲಿ ಕಾನೂನುಗಳು, ಧರ್ಮಗ್ರಂಥಗಳು, ಸಾಹಿತ್ಯ ಕೃತಿಗಳು ರಚಿತವಾದವು. ಮೊದಲನೆಯ ಚಕ್ಕೈ ಅರಸ 1ನೆಯ ರಾಮನಿಗೆ (1782-1809) ಕಾಂಬೋಡಿಯ ರಾಜ ಸಾಮಂತನಾದ. ಸಾಹಿತ್ಯಾಭಿಮಾನಿ ಇಮ್ಮಡಿ ರಾಮನ ಕಾಲದಲ್ಲಿ (1809-24) ಥೈ ಭಾಷೆಯಲ್ಲಿ ರಾಮಾಯಣ ರಚಿತವಾಯಿತು. 3ನೆಯ ರಾಮನ ಕಾಲದಲ್ಲಿ (1824-51) ಬ್ರಿಟಿಷರು ಆಗಿನ ಬರ್ಮ ಯುದ್ಧದಲ್ಲಿ (1824) ಮೈನ್‍ಮಾರ್ ರಾಜ್ಯವನ್ನು ಸೋಲಿಸಿದ ಕಾರಣ ಮೈನ್‍ಮಾರ್‍ದ ಭಯವೂ ಥೈಲೆಂಡಿಗೆ ತಪ್ಪಿತು. 4ನೆಯ ರಾಮನ ಆಳ್ವಿಕೆಯಲ್ಲಿ (1851-68) ಬ್ರಿಟಿಷರೊಡನೆ 1855ರಲ್ಲಿ ಅಮೆರಿಕನ್ ಮತ್ತು ಫ್ರೆಂಚರೊಡನೆ 1856ರಲ್ಲಿ. ಥೈಲೆಂಡು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿತು. 1855ರ ಒಪ್ಪಂದದ ಪ್ರಕಾರ ಬ್ರಿಟಿಷರಿಗೆ ಬ್ಯಾಂಗ್‍ಕಾಕ್ ನಗರದಲ್ಲಿ ಬ್ರಿಟಿಷ್ ರಾಜಪ್ರತಿನಿಧಿಯನ್ನು ಇರಿಸಲು, ಭೂಮಿಯನ್ನು ಸಂಪಾದಿಸಿಕೊಳ್ಳಲು ಹಾಗೂ ವ್ಯಾಪಾರ ನಡೆಸಲು ಅವಕಾಶವಾಯಿತು. ಭೂಮಿಯನ್ನು ಆಕ್ರಮಿಸಿಕೊಂಡ ಬ್ರಿಟಿಷರು ಹಾಗೂ ಫ್ರೆಂಚರ ವಿರುದ್ಧ ಥೈಲೆಂಡ್ ಕೊನೆಗೆ ಯುದ್ಧ ಮಾಡಬೇಕಾಯಿತು. 1863ರಲ್ಲಿ ಥೈಲೆಂಡ್ ಫ್ರೆಂಚರಿಗೆ ಕಾಂಬೋಡಿಯ ಮೇಲಣ ತನ್ನ ಪ್ರಭುತ್ವವನ್ನು ಬಿಟ್ಟುಕೊಟ್ಟುದಲ್ಲದೇ, ಮೇಕಾಂಗ್ ನದಿಯ ಪೂರ್ವಭಾಗದ ರೇವುಗಳನ್ನೂ ಪ್ರದೇಶಗಳನ್ನೂ ಕೊಟ್ಟಿತು. 1908ರಲ್ಲಿ ಬ್ರಿಟಿಷ್ ಮಲಯದ ಉತ್ತರದಲ್ಲಿದ್ದ ತನ್ನ 4 ದಕ್ಷಿಣ ರಾಜ್ಯಗಳನ್ನು ಬ್ರಿಟಿಷರಿಗೆ ವಹಿಸಿಕೊಟ್ಟಿತು. ಈ ಒಪ್ಪಂದಗಳಿಂದ ರಾಜ್ಯಕ್ಕೆ ಭಾರಿ ನಷ್ಟವಾದರೂ ಯೂರೋಪಿನೊಡನೆ ವಾಣಿಜ್ಯ ಸಂಪರ್ಕ ದೊರಕಿತು. ಒಂದನೆಯ ಮಹಾ ಯುದ್ಧದಲ್ಲಿ ಥೈಲೆಂಡ್ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿತು(1917). ಅನಂತರ ಅದು ರಾಷ್ಟ್ರಗಳ ಕೂಟದ ಸದಸ್ಯ ರಾಷ್ಟ್ರವಾಯಿತು.

ಎರಡನೆಯ ಮಹಾಯುದ್ಧ: ಎರಡನೆಯ ಮಹಾಯುದ್ಧ ಪ್ರಾರಂಭವಾದ ಮರುವರ್ಷವೇ (1940) ಥೈಲೆಂಡ್ ಇಂಡೋಚೀನದ ಮೇಲೆ ದಾಳಿ ನಡೆಸಿತು; 6ನೆಯ ಮಾರ್ಚ್ 1941)ರ ಕೌಲಿನ ಪ್ರಕಾರ ಫ್ರಾನ್ಸಿನ ವಿಚಿ ಸರ್ಕಾರ ಥೈಲೆಂಡಿಗೆ ಲಾವೋಸ್ ಮತ್ತು ಕಾಂಬೋಡಿಯದ ಕೆಲವು ಭಾಗಗಳನ್ನು ಕೊಡಬೇಕಾಯಿತು. ಥೈಲೆಂಡ್ 1940ರ ಜುಲೈ 2ರಂದು ಬ್ರಿಟಿಷರೊಡನೆ ಬ್ಯಾಂಗ್‍ಕಾಕ್‍ನಲ್ಲಿ ನಿಶ್ಯಸ್ತ್ರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಡಿಸೆಂಬರ್ 1941ರಲ್ಲಿ ಜಪಾನ್ ಥೈಲೆಂಡನ್ನು ಆಕ್ರಮಿಸಿಕೊಂಡ ಕಾರಣ, ಜಪಾನಿನ ನಿಯಂತ್ರಣಕ್ಕೊಳಪಟ್ಟು 1942ರ ಜನವರಿ 25ರಂದು ಬ್ರಿಟನ್ ಮತ್ತು ಅಮೆರಿಕಗಳ ವಿರುದ್ಧ ಯುದ್ಧ ಘೋಷಿಸಿತು. ಮೈನ್‍ಮಾರ್ ಮತ್ತು ಭಾರತದ ಮೇಲೆ ದಾಳಿ ನಡೆಸಲು ಸಹಾಯದೊಂದಿಗೆ ಜಪಾನು ಮೈನ್‍ಮಾರ್‍ವನ್ನು ಆಕ್ರಮಿಸಿಕೊಂಡಾಗ ಬ್ರಿಟಿಷರಿಗೆ ಸೇರಿದ್ದ ಮೈನ್‍ಮಾರ್‍ದ 2 ಷಾನ್ ರಾಜ್ಯಗಳನ್ನೂ 4 ವಲಯ ರಾಜ್ಯಗಳನ್ನೂ ಜಪಾನು ಥೈಲೆಂಡಿಗೆ ಕೊಟ್ಟಿತು (ಜುಲೈ 5, 1943).

ಯುದ್ಧಾನಂತರ ಕಾಲ: ಎರಡನೆಯ ಮಹಾಯುದ್ಧ ಮುಗಿದ ಮೇಲೆ 1946ರ ಜನವರಿ 1ರಂದು ಬ್ರಿಟನ್ ಮತ್ತು ಭಾರತ ಒಂದು ಪಕ್ಷವಾಗಿಯೂ ಥೈಲೆಂಡ್ ಮತ್ತೊಂದು ಪಕ್ಷವಾಗಿಯೂ ಶಾಂತಿ ಒಪ್ಪಂದ ಮಾಡಿಕೊಂಡಾಗ ಥೈಲೆಂಡ್ ತಾನು ಯುದ್ಧ ಕಾಲದಲ್ಲಿ ಜಪಾನಿನಿಂದ ಪಡೆದ ಬ್ರಿಟಿಷ್ ಪ್ರದೇಶಗಳನ್ನು ಬ್ರಿಟಿಷರಿಗೆ ಹೊಂದಿರುಗಿಸಿತು. ತರುವಾಯ ವಿಶ್ವಸಂಸ್ಥೆಯಲ್ಲಿ ಥೈಲೆಂಡಿನ ಉಮೇದುವಾರಿಕೆಗೆ ಇಂಗ್ಲೆಂಡ್ ಮತ್ತು ಭಾರತ ಬೆಂಬಲ ನೀಡಲು ನಿಂತವು. ಒಂದು ವರ್ಷದ ತರುವಾಯ ಫ್ರಾನ್ಸ್ ಸಹ ಥೈಲೆಂಡಿನೊಡನೆ ಶಾಂತಿ ಒಪ್ಪಂದ ಮಾಡಿಕೊಂಡಿತು. ಹಿಂದೆ ತಾನು ವಿಚಿ ಸರ್ಕಾರದಿಂದ ಪಡೆದ ಇಂಡೋಚೀನ ಭಾಗಗಳನ್ನು ಥೈಲೆಂಡ್ ಫ್ರಾನ್ಸಿಗೆ ಹಿಂದಿರುಗಿಸಿತು. (ನವೆಂಬರ್ 1946).

ಈ ಮಧ್ಯೆ ಥೈಲೆಂಡ್‍ನ ಯುವಕ ದೊರೆ ಆನಂದ ಮಹಿದೋಖ್ ಕೊಲೆಯಾಗಿ ಅವನ ಸಹೋದರ ಭೂಮಿಬಾಲ್ ಅತ್ಯುಲ್ಯತೇಜ್ (ಜ. 1927) ಪಟ್ಟಾಭಿಷಿಕ್ತನಾದ (1946). 1947 ರ ಕ್ಷಿಪ್ರಾಕ್ರಮಣದಲ್ಲಿ ಸೈನ್ಯಾಧಿಕಾರಿ ಫೀಲ್ಡ್ ಮಾರ್ಷಲ್ ಫಿಬುಲ್ ಸೊಂಗ್ರಾಮ್ ರಾಜಪ್ರತಿನಿಧಿಯ ಆಡಳಿತವನ್ನು ತೆಗೆದುಹಾಕಿ ಅಧಿಕಾರ ವಹಿಸಿಕೊಂಡ. 1950 ರ ಹೊತ್ತಿಗೆ ಇವನ ಪ್ರಭಾವ ಕುಗ್ಗಿತು. ಥೈಲೆಂಡ್ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿ 1950-53ರ ಕೊರಿಯ ಯುದ್ಧದಲ್ಲಿ ಭಾಗವಹಿಸಿತು. 1957ರಲ್ಲಿ ನಡೆದ ರಕ್ತರಹಿತ ಕ್ರಾಂತಿಯಲ್ಲಿ ಸೊಂಗ್ರಾಮನನ್ನು ಪದಚ್ಯುತಿಗೊಳಿಸಿ ಫೀಲ್ಡ್ ಮಾರ್ಷಲ್ ಸರಿತ್ ತನಾರತ್ ಆಡಳಿತ ವಹಿಸಿಕೊಂಡ. ಸಾರ್ವತ್ರಿಕ ಚುನಾವಣೆಗಳು ನಡೆದರೂ 1958ರಲ್ಲಿ ಸೈನ್ಯಾಡಳಿತ ಘೋಷಿಸಲ್ಪಟ್ಟು ಎಲ್ಲ ರಾಜಕೀಯ ಪಕ್ಷಗಳೂ ರದ್ದಾದವು. 1963ರಲ್ಲಿ ಸರಿತ್ ಮರಣ ಹೊಂದಲು ಜನರಲ್ ತರುವಾಯ ಫೀಲ್ಡ್ ಮಾರ್ಷಲ್ ಥಾನೋಂ ಕಿಟ್ಟಿಕ ಚರೋನ್ ಮುಖ್ಯ ಮಂತ್ರಿಯಾದ. ಥೈಲೆಂಡು 1965ರಲ್ಲಿ ವಿಯೆಟ್‍ನಾಮ್ ಯುದ್ಧದಲ್ಲಿ ದಕ್ಷಿಣ ವಿಯೆಟ್‍ನಾಮ್‍ನ ಪಕ್ಷವಹಿಸಿತು. ರಾಜ್ಯದಲ್ಲಿ 10 ವರ್ಷ ಮಿಲಿಟರಿ ಆಡಳಿತ ನಡೆದು ಜುಲೈ 1968ರಲ್ಲಿ ಸಂವಿಧಾನ ರಚಿತವಾಯಿತು. 1969ರ ಚುನಾವಣೆಯಲ್ಲಿ 7 ರಾಜಕೀಯ ಪಕ್ಷಗಳು ಸಂಸತ್ತಿನಲ್ಲಿ ಸ್ಥಾನ ಪಡೆದವುಗಳ ಪೈಕಿ ಮಿಲಿಟರಿ ಪಕ್ಷಕ್ಕೆ ಬಹುಮಾನವಿತ್ತು. ದೇಶದಲ್ಲಿ ಅಶಾಂತಿಯ ಪರಿಸ್ಥಿತಿ ಇತ್ತೆಂಬ ಕಾರಣದಿಂದ ಫೀಲ್ಡ್ ಮಾರ್ಷಲ್ ಸ್ಥಾಪಿಸಿದ. ಅವನ ಅಧ್ಯಕ್ಷತೆಯಲ್ಲಿ 5 ಮಂದಿ ಸದಸ್ಯರ ರಾಷ್ಟ್ರೀಯ ಆಡಳಿತ ಪರಿಷತ್ತು ಏರ್ಪಟ್ಟು ಆಡಳಿತ ವಹಿಸಿತು. ಡಿಸೆಂಬರ್ 1972ರಲ್ಲಿ ಮಧ್ಯಕಾಲಿಕ ಸಂವಿಧಾನ ಘೋಷಿತವಾಗಿ ಶಾಸನಸಭೆ ಹಾಗೂ ಮಂತ್ರಿ ಮಂಡಲ ರಚಿತವಾಯಿತು. ಥಾನೋಮ್ ಮುಖ್ಯಮಂತ್ರಿಯಾದ. ಖಾಯಂ ಸಂವಿಧಾನವನ್ನು ರಚಿಸಲು ತಪ್ಪಿದ್ದರಿಂದಲೂ ಬೆಲೆಗಳ ಏರಿಕೆ, ಲಂಚಕೋರತನ ಹಾಗೂ ದಂಗೆಗಳು ಹೆಚ್ಚಿದ್ದರಿಂದಲೂ ಅಮೆರಿಕನ್ ಸೈನ್ಯ ಥೈಲೆಂಡಿನಲ್ಲಿದ್ದರಿಂದಲೂ ವಿದ್ಯಾರ್ಥಿಗಳ ಗಲಭೆಗಳಾಗಿ ರಕ್ತಪಾತವಾಯಿತು. ಇವುಗಳ ಪರಿಣಾಮವಾಗಿ ಮಿಲಿಟರಿ ಸರ್ಕಾರ ಉರುಳಿತು (1973). ಅಕ್ಟೋಬರ್ 1974 ರಲ್ಲಿ ಹೊಸ ಸಂವಿಧಾನ ರಚನೆಯಾಗಿ ಸನ್ಯ ಧರ್ಮಸಾಕಿಯ ನಾಯಕತ್ವದಲ್ಲಿ ತಾತ್ಕಾಲಿಕ ಸರಕಾರ ಏರ್ಪಟ್ಟಿತು. 1975ರ ಚುನಾವಣೆಯಲ್ಲಿ 42 ರಾಜಕೀಯ ಪಕ್ಷಗಳು ಹೊಸ ಪ್ರತಿನಿಧಿಗಳ ಸಭೆಗೆ ಸ್ಪರ್ಧಿಸಿದವು. ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲವಾಗಿ ಪ್ರಜಾ ಪಕ್ಷದ ನಾಯಕತ್ವದಲ್ಲಿ ಸಂಯುಕ್ತ ಸರ್ಕಾರ ಏರ್ಪಟ್ಟಿತು. ಸೇನೈ ಪ್ರಮೋಚ್ ಮುಖ್ಯಮಂತ್ರಿಯಾದ. ಮಾರ್ಚ್ 1975 ರಲ್ಲಿ ಅವನ ಮಂತ್ರಿಮಂಡಲದ ವಿರುದ್ಧ ಅವಿಶ್ವಾಸ ನಿರ್ಣಯ ಬಂದು, ಸೈನಿಕ ಹಾಗೂ ಉದ್ಯಮ ಹಿತಾಸಕ್ತಿಗಳುಳ್ಳ ಸಂಯುಕ್ತ ಪಕ್ಷ ಅಧಿಕಾರಕ್ಕೆ ಬಂತು. ಅದರ ನಾಯಕ ಕುಕ್ರಿತ್ ಪ್ರಮೋಚ್ ಅವರು ತರಲು ಪ್ರಯತ್ನಿಸಿದ ಸುಧಾರಣೆಗಳಾವುವೂ ಕಾರ್ಯಗತವಾಗಲಿಲ್ಲ. 

ಥೈಲೆಂಡ್ ಇಂಡೋಚೀನೀ ಯುದ್ಧರಂಗದ ಸಮೀಪದ ರಾಜ್ಯವಾಗಿದ್ದ ಪ್ರಯುಕ್ತ ವಿದೇಶಾಂಗ ನೀತಿಯಲ್ಲಿ ಅದು ಅಮೆರಿಕದ ಪಕ್ಷ ವಹಿಸಿತು. ತನ್ನ ಸೈನ್ಯಗಳನ್ನು ದಕ್ಷಿಣ ವಿಯೆಟ್‍ನಾಮಿನ ನೆರವಿಗೆ ಕಳುಹಿಸಿತಾದರೂ 1970ರಲ್ಲಿ ವಾಪಸು ಕರೆಸಿಕೊಂಡಿತು. 1976ರ ಏಪ್ರಿಲ್‍ನಲ್ಲಿ ನಡೆದ ಚುನಾವಣೆಗಳ ಅನಂತರ ಕುಕ್ರಿತ್ ಪ್ರಮೋಜರ ಸೋದರನಾದ ಸೇನೈ ಪ್ರಮೋಜರು ಸಂಮಿಶ್ರ ಮಂತ್ರಿ ಮಂಡಲ ರಚಿಸಿದರು. ಅದರ ಅಕ್ಟೋಬರ್ 6ರಂದು ನಡೆದ ಕ್ಷಿಪ್ರಕ್ರಾಂತಿಯಿಂದ ಈ ಸರ್ಕಾರ ಉರುಳಿತು. ತಾನಿನ್ ಕ್ರೈವಿಚಿಯೆನ್ ಪ್ರಧಾನಿಯಾದರು. 					
	(ವಿ.ಜಿ.ಕೆ.)

ವಾಸ್ತು ಶಿಲ್ಪ, ಶಾಸನಗಳು

ವಾಸ್ತು ಶಿಲ್ಪ: ಕ್ರಿ. ಶ. 2ನೆಯ ಶತಮಾನದಿಂದಲೇ ಥೈಲೆಂಡಿನ ಮೇಲೆ ಭಾರತೀಯ ಸಂಸ್ಕøತಿ ಪ್ರಭಾವ ಬೀರಿದ್ದರಿಂದ ಇಲ್ಲಿ ಈ ಸಂಸ್ಕøತಿಗೆ ಸೇರಿದ ಅವಶೇಷಗಳು ದೊರಕಿವೆ. ಪ್ರವಥೋಮ್‍ನಲ್ಲಿ ದೊರಕಿರುವ ದೇವತೆಗಳ ಮೂರ್ತಿ ಶಿಲ್ಪಗಳು ಕ್ರಿ.ಶ. 2ನೆಯ ಶತಮಾನಕ್ಕೆ ಸೇರಿದವು ಎಂಬುದರಲ್ಲಿ ಸಂದೇಹವಿಲ್ಲ. ವಾಂಗ್ ಟಕ್‍ನಲ್ಲಿ ದೊರಕಿರುವ ಬುದ್ಧ ವಿಗ್ರಹಗಳು ಅಮರಾವತಿಯ ಶಿಲ್ಪಶೈಲಿಗೆ ಸೇರಿದವೆಂದು ತಿಳಿದು ಬಂದಿದೆ. ಸುಮಾರು 5ನೆಯ ಶತಮಾನಕ್ಕೆ ಸೇರಬಹುದಾದ ಗುಪ್ತ ಶೈಲಿಯನ್ನು ತೋರಿಸುವ ಅನೇಕ ಶಿಲ್ಪಗಳೂ ಇಲ್ಲಿ ದೊರಕಿವೆ.

ಅಯೂಧಿಯಾ ನಗರ ಸುಖೋ ಥೈ ರಾಜ್ಯದ ಮುಖ್ಯ ನಗರವಾಗಿದ್ದರಿಂದ ಅಲ್ಲಿ ಅನೇಕ ಕಟ್ಟಡಗಳು ದೊರಕಿವೆ. ಸುಖೋದಯದಲ್ಲಿರುವ ಪಾತ್‍ಜೈ ಮಹಾದ್ವಾರ ಗಮನಾರ್ಹವಾದ್ದು. ಇದರ ಸಮೀಪದಲ್ಲಿರುವ ಪ್ರಪಂಗ್ ಮತ್ತು ಫ್ರಚೇಡಿ ಸ್ತೂಪಗಳು ಮುಖ್ಯವಾದವು. ಪ್ರಪಂಗ್ ಸ್ತೂಪ ಥೈಲೆಂಡಿನ ಪ್ರಾಚೀನ ವಾಸ್ತು ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ದೂರದಿಂದ ನೋಡಿದರೆ ಹಿಂದೂ ದೇವಾಲಯದ ಶಿಖರದಂತೆ ಕಾಣುತ್ತದೆ. ಕೆಳಭಾಗದಿಂದ ಅಷ್ಟಕೋನಾಕಾರವಾಗಿ ಮೇಲೇರುತ್ತ, ಮೆಟ್ಟಲು ಮೆಟ್ಟಲಾಗಿ ಇದೇ ಆಕಾರದಲ್ಲೇ ಮುಂದುವರಿದು, ಮೇಲೇರಿದಂತೆ ಕಿರಿದಾಗುತ್ತಾ ಹೋಗುತ್ತದೆ. ಹೀಗೆ ಮೂರು ಅಥವಾ ನಾಲ್ಕು ಅಂತಸ್ತುಗಳ ಅನಂತರ ನಾಗರಶೈಲಿಯ ಶಿಖರ ಮುಂದುವರಿಯುತ್ತದೆ. ಕೆಳಗಿನಿಂದ ಮೇಲೆ ನೋಡಿದರೆ, ಅದು ದ್ರಾವಿಡ ಮತ್ತು ನಾಗಶೀಖರಗಳನ್ನು ಒಂದರ ಮೇಲೊಂದು ನಿಲ್ಲಿಸಿರುವಂತೆ ಕಾಣುತ್ತದೆ. ಇದು ಸಾಮಾನ್ಯವಾಗಿ ಥೈಲೆಂಡಿನ ವಾಸ್ತು ಕೃತಿಗಳ ಸ್ವರೂಪ.

ಫ್ರಜೇಡಿ ಸ್ತೂಪ ಘಂಟಾಕೃತಿಯಲ್ಲಿದೆ. 344 ಅಡಿ ಎತ್ತರದ ಈ ಸ್ತೂಪ ಥೈಲೆಂಡಿನಲ್ಲಿ ಮುಖ್ಯವಾದ್ದು. ಆರು ಅಂತಸ್ತುಗಳ ಜಗಲಿಯ ಮೇಲೆ ಈ ಸ್ತೂಪದ ಅಂಡದ ಮೇಲೆ ಚೌಕನೆಯ ಎರಡಂತಸ್ತುಗಳ ಹರ್ಮಿಕೆಯೂ ಅದರ ಮೇಲೆ ಕ್ರಮವಾಗಿ ಕಿರಿದಾಗುವ ಶಿಖರವೂ ಇವೆ.

ಸಜ್ಜನಾಲಯದಲ್ಲಿರುವ ಚತುರ್ಮುಖ ಮಂಟಪ ಥೈಲೆಂಡಿನ ಉತ್ತಮ ಬೌದ್ಧ ಕಟ್ಟಡಗಳಲ್ಲೊಂದು. ಚೌಕಾಕಾರದ ವಿಶಾಲ ಹಜಾರದ ಮಧ್ಯದಲ್ಲಿ ಚೌಕನೆಯ ಮಂಟಪವಿದೆ. ಇದರ ನಾಲ್ಕು ಗೋಡೆಗಳಲೂ ಬುದ್ಧ ವಿಗ್ರಹಗಳುಂಟು. ಇದೇ ರೀತಿಯ ಇನ್ನೊಂದು ಕಟ್ಟಡವೆಂದರೆ ಸುಖೋದಯದಲ್ಲಿರುವ ಇಟ್ಟಿಗೆಯ ಮಂಟಪ. ಇಲ್ಲಿಯ ವಿಶೇಷವೆಂದರೆ ಇಟ್ಟಿಗೆಯಿಂದ ಗೋಡೆಗೆ ಒರಗಿದಂತೆ ಮಾಡಿರುವ ಬುದ್ಧ ವಿಗ್ರಹ. ಇದರ ಎತ್ತರ ಐವತ್ತು ಅಡಿ. ಲೋಪಬುರಿಯಲ್ಲಿರುವ ಪ್ರಥಟ್ ದೇವಾಲಯದಲ್ಲೂ ಚೌಕನೆಯ ಹಜಾರ ಮತ್ತು ಪಧ್ಯದಲ್ಲಿ ಗರ್ಭಗೃಹ ಇದೆ. ಇದರಲಿ ಸ್ತೂಪವಿದೆ. ಈ ಸ್ತೂಪದ ಎದುರಿಗೆ ಕಂಬಗಳು ಇವೆ. ಭಾರತೀಯ ದೇವಾಲಯದ ಮಾದರಿಯ ರಚನೆಯಿದು.

ಭಾರತೀಯ ಸಂಸ್ಕøತಿಯ ಪ್ರಭಾವ ಕಡಿಮೆಯಾದಂತೆ, ಥೈಲೆಂಡಿನ ಶಿಲ್ಪಗಳಲ್ಲಿ ತಮ್ಮವೇ ಆದ ಶೈಲಿಗಳು ಕಾಣತೊಡಗುತ್ತವೆ. ಇದು ಕಂಬುಜದೊಡನೆ ನಿಕಟ ರಾಜಕೀಯ ಸಂಬಂಧ ಹೊಂದಿದುದರಿಂದ, ಅಲ್ಲಲ್ಲಿ ಖ್ಮೆರ್ ಶೈಲಿಯ ಪ್ರಭಾವಗಳಿವೆ. ಆದರೆ ಪ್ರಧಾನವಾಗಿ ಥೈ ಶೈಲಿ, ವಿಶೇಷವಾಗಿ ಉತ್ತರದಲ್ಲಿ, ಮುಂದುವರಿಯಲು ಪ್ರಾರಂಭವಾಯಿತು. ಈ ಶೈಲಿ ಅದುವರೆಗೂ ಬೆಳೆದುಬಂದಿದ್ದ ಇಂಡೊ-ಥೈ ಶೈಲಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಬಾಗಿದ ಮೂಗು, ಎಳಸಾದ ತುಟಿ, ಖಂಡ ವೃತ್ತಾಕಾರದ ಹುಬ್ಬು ಇವು ಥೈ ಶೈಲಿಯ ಮುಖ್ಯ ಲಕ್ಷಣಗಳು. ಇವು ವಿಶೇಷವಾಗಿ ಸುಖೋದಯ ಮತ್ತು ಲೋಪಬುರಿ ನಗರಗಳಲ್ಲಿ ಬೆಳೆದವು. ಇದೇ ಸಮಯದಲ್ಲಿ ದಕ್ಷಿಣ ಥೈಲೆಂಡಿನಲ್ಲಿ ಖ್ಮೆರ್ ಶೈಲಿ ಬೆಳೆಯಿತು. ಅಲ್ಲಿಯ ಮೂರ್ತಿ ಶಿಲ್ಪಗಳಿಗೆ ನೆಟ್ಟಗಿನ ಹುಬ್ಬು, ಅಗಲ ಬಾಯಿ ಇವೆ. ಇವು ಖ್ಮೆರ್ ಶೈಲಿಗೆ ಸೇರಿದವು.
14ನೆಯ ಶತಮಾನಕ್ಕೆ ಸೇರಿದ ವಾತ್‍ಸಿಜಿಮ್ ಎಂಬಲ್ಲಿಯ ದೇವಾಲಯದಲ್ಲಿ ಬುದ್ಧನ ಜಾತಕ ಕಥೆಗಳು ಚಿತ್ರಿತವಾಗಿವೆ. ಇವು ರೇಖಾಚಿತ್ರಗಳಂತೆ ಕಾಣುತ್ತವೆ. ಇದೇ ಕಾಲಕ್ಕೆ ಸೇರಬಹುದಾದ, ವಿಷ್ಣು ಮತ್ತು ಶಿವನ ಕಂಚಿನ ವಿಗ್ರಹಗಳು ಸುಖೋದಯದಲ್ಲಿ ದೊರಕಿವೆ. ಇವು ಥೈ ಶೈಲಿಯ ಅವನತಿಯನ್ನು ಸೂಚಿಸುತ್ತವೆ.
ಶಾಸನಗಳು: ಭಾರತೀಯ ಸಂಸ್ಕøತಿ ಥೈಲೆಂಡಿನಲ್ಲಿ ಕ್ರಿ. ಶ. 2ನೆಯ ಶತಮಾನದಲ್ಲಿ ಪ್ರಸರಿಸಿದುದರಿಂದ ಅಲ್ಲಿಯ ಶಾಸನಗಳಲ್ಲೂ ಭಾರತೀಯ ರೂಪವೇ ಬಹು ಕಾಲದ ವರೆಗೆ ಬಳಕೆಗೆ ಬಂತು. ಬುದ್ಧನ ವಿಗ್ರಹಗಳ ಮೇಲೆ, ಗೋಡೆಗಳ ಮೇಲೆ ಶಾಸನಗಳನ್ನು ಕೆತ್ತಿರುವುದು ಕಾಣಬರುತ್ತದೆ. ಬ್ರಾಹಜ್ಮೀಲಿಪಿ ಇಲಲೂಬಳಕೆಯಲ್ಲಿದ್ದು ಕಾಲಕ್ರಮದಲ್ಲಿ ವಿಕಾಸ ಹೊಂದಿತ್ತು. ಲವಪುರಿಯ ಮಹಾರಾತು, ವತ್‍ಖೋಯ್, ಸಾಲ್‍ಸುನ್, ರಾಜಪುರಿ ಮುಂತಾದ ಕಡೆಗಳಲ್ಲಿ ದೊರಕಿರುವ ಶಾಸನಗಳು ಚರಿತ್ರೆಯ ರಚನೆಗೆ ಸಹಕಾರಿಯಾಗಿವೆ. ಇವೆಲ್ಲವೂ ಸಂಸ್ಕøತ ಭಾಷೆಯಲ್ಲಿವೆ. ಭಾರತದಲ್ಲಿದ್ದಂತೆಯೇ ಅನೇಕ ಶಾಸನಗಳು ದೇವತಾಸ್ತುತಿಯಿಂದ ಆರಂಭವಾಗುತ್ತವೆ. ಸ್ವಸ್ತಿ ಶ್ರೀ ಮುಂತಾದವು ಶಾಸನದ ಆರಂಭದಲ್ಲಿ ಕಾಣಬರುತ್ತವೆ. ಕೆಲವು ಶಾಸನಗಳಲ್ಲಿ ಕಲಿಯುಗ ವರ್ಷವನ್ನೂ ಮತ್ತೆಕೆಲವಲ್ಲಿ ಶಕವರ್ಷವನ್ನೂ ಹೇಳಲಾಗಿದೆ.

ರಾಮಕಮ್ಹಂಗ್ ಎಂಬ ರಾಜ ಐ ಭಾಷೆಗೆ ಅನುಕೂಲವಾದ ಲಿಪಿಯೊಂದನ್ನು ರೂಪಿಸಿ, ಅದು ಥೈಲೆಂಡಿನಲ್ಲಿ ಬಳಕೆಗೆ ಬರುವ ಹಾಗೆ ಮಾಡಿದ. ಅಂದರೆ ಹದಿಮೂರನೆಯ ಶತಮಾನದ ಅನಂತರದ ಶಾಸನಗಳು ಥೈ ಲಿಪಿಯಲ್ಲಿ ಬರಲು ಪ್ರಾರಂಭವಾದವು. 
 (ಎ.ಪಿ.ಎನ್.)

ಶಿಕ್ಷಣ: ಇತ್ತೀಚಿನ ವರೆಗೂ ಸುಯಾಂ ಎಂದು ಕರೆಯಲಾಗುತ್ತಿದ್ದ ಈ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣ ಮಠಗಳಲ್ಲೂ ಸಂಘಾರಾಮಗಳಲ್ಲೂ ವ್ಯವಸ್ಥೆಗೊಂಡಿತ್ತು. ಅವು ಕೇವಲ ಧಾರ್ಮಿಕ ಶಿಕ್ಷಣಕ್ಕೆ ಮೀಸಲಾಗಿದ್ದು ಗಂಡುಮಕ್ಕಳನ್ನು ಮಾತ್ರ ಸೇರಿಸಿಕೊಳ್ಳುತ್ತಿದ್ದುವು. ಮಧ್ಯಯುಗದಲ್ಲೂ ಈ ವ್ಯವಸ್ಥೆ ಮುಂದುವರಿದುಕೊಂಡೇ ಬಂತು. 1662 ರಲ್ಲಿ ಫ್ರಾನ್ಸಿನಕ್ರೈಸ್ತ ಪಾದ್ರಿಗಳು ದೇಶದಲ್ಲಿ ಕೆಲವು ಶಾಲೆಗಳನ್ನು ಆರಂಭಿಸಿದರು. ಆಗ ರಾಜನಾಗಿದ್ದ ನಾರೈ ಆ ಪಾದ್ರಿಗಳ ಉದ್ದೇಶದ ಬಗ್ಗೆ ಅನುಮಾನಪಟ್ಟು ಅವರ ಚಟುವಟಿಕೆಗಳನ್ನು ವಿಸ್ತರಿಸಲು ಅವಕಾಶವೀಯಲಿಲ್ಲ. 1768 ರಲ್ಲಿ ಆರಂಭವಾಗಿ ಇನ್ನೂ ಮುಂದುವರೆಯುತ್ತಿರುವ ಚಕ್ರಿ ವಂಶದ ಅರಸುಗಳು ಜನತೆಯ ಶಿಕ್ಷಣ ಮತ್ತು ಸಂಸ್ಕøತಿಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತ ಬಂದಿರುವರು. ಅವರಲ್ಲಿ ಮೊದಲ ಮೂವರು ಅರಸರು (ಪ್ರಥಮ ರಾಮ, ಇಮ್ಮಡಿ ರಾಮ, ಮುಮ್ಮಡಿ ರಾಮ) ಸ್ವತ: ಕವಿಗಳಾಗಿದ್ದು ಸಾಹಿತ್ಯ ರಚನೆಗೆ ಸುಮಾರು ಸಹಾಯ ಮಾಡಿದರು. ಹತ್ತೊಂಭತ್ತನೆಯ ಶತಮಾನದ ಆದಿಯಲ್ಲಿ ರಾಜನಾಗಿದ್ದ ಇಮ್ಮಡಿ ರಾಮನ ಆಳ್ವಿಕೆಯಲ್ಲಿ ಕ್ರೈಸ್ತಪಾದ್ರಿಗಳು ಅಧಿಕ ಸಂಖ್ಯೆಯಲ್ಲಿ ಪಾಶ್ಚಾತ್ಯ ಮಾದರಿಯ ಶಾಲೆಗಳನ್ನು ಆರಂಭಿಸಲು ಅವಕಾಶ ಸಿಕ್ಕಿತು. ಆದರಿಂದ ಥೈಲೆಂಡಿನಲ್ಲಿ ಲೌಕಿಕ ಶಿಕ್ಷಣಕ್ಕೆ ತಳಹದಿ ಹಾಕಿದಂತಾಯಿತು. ನಾಲ್ವಡಿ ರಾಮನೂ ಪಂಚಮ ರಾಮನೂ ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆದಿದ್ದರಿಂದ ನಾಡಿನಲ್ಲಿ ಇಂಗ್ಲಿಷ್ ಪದ್ಧತಿಯ ಶಿಕ್ಷಣಕ್ಕೆ ಪ್ರೋತ್ಸಾಹವಿತ್ತರು. 1858 ರಲ್ಲಿ ಪಂಚಮ ರಾಮ ರಾಜಧಾನಿಯಾದ ಬಾಂಕಾಕಿನ ಅರಮನೆಯ ಆವರಣದಲ್ಲಿ ಲೌಕಿಕ ಶಿಕ್ಷಣಕ್ಕೆ ಮೀಸಲಾದ ರಾಯಲ್ ಸೇವಾಶಾಖೆಗಳಿಗೆ ಅಧಿಕಾರಗಳನ್ನು ತರಬೇತು ಮಾಡುವ ಕಾರ್ಯಕ್ಕೂ ಅದು ಕೇಂದ್ರ ಸಂಸ್ಥೆಯಾಯಿತು. ಆತ ದೇಶದಲ್ಲಿ ರಾಜಕೀಯ ಸುಧಾರಣೆಗಳನ್ನು ತಂದುದರ ಫಲವಾಗಿ ಅಧಿಕ ಸಂಖ್ಯೆಯಲ್ಲಿ ಅಧಿಕಾರಿಗಳು ಆಡಳಿತ ಯಂತ್ರಕ್ಕೆ ಅಗತ್ಯವಾಯಿತು. ಈ ಅಗತ್ಯವನ್ನು ಪೂರೈಸುವ ಮೂಲ ಉದ್ದೇಶದಿಂದ ದೇಶದ ವಿವಿಧ ಬಾಗಗಳಲ್ಲಿ ಹೊಸಹೊಸ ಶಾಲೆಗಳನ್ನು ಆತ ಪ್ರಾರಂಭಿಸಿದ. ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದ ಮಠ ಮತ್ತು ಸಂಘಾರಾಮಗಳಲ್ಲಿ, ಧಾರ್ಮಿಕ ಪಠ್ಯಕ್ರಮದ ಜೊತೆಗೆ ಲೌಕಿಕ ಪಠ್ಯಕ್ರಮವನ್ನೂ ಸೇರಿಸಬೇಕೆಂದು ಆಜ್ಞೆ ಮಾಡಿದ. ಇದರ ಫಲವಾಗಿ ರಾಷ್ಟ್ರದಲ್ಲಿ ಸಾರ್ವತ್ರಿಕ ಶಿಕ್ಷಣವ್ಯವಸ್ಥೆ ಆರಂಭವಾಯಿತು. ಸಂಖ್ಯೆಯಲ್ಲಿ ದಿನದಿನಕ್ಕೂ ಹೆಚ್ಚುತ್ತ ಹೋಗುತ್ತಿದ್ದ ಸರ್ಕಾರದ ಶಾಲೆಗಳ ಆಡಳಿತ ನಿರ್ವಹಿಸಲು 1887ರಲ್ಲಿ ಶಿಕ್ಷಣ ಶಾಖೆ ಅಸ್ತಿತ್ವಕ್ಕೆಬಂತು. ಶಿಕ್ಷಣ ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಯಿತು. 1917ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕಾಕಿನ ಚೂಳಾಲಾಂಗ್ಕಾರ್ನ್ ವಿಶ್ವವಿದ್ಯಾಲಯವೂ ಆರಂಭವಾಯಿತು. 
1930 ರಲ್ಲಿ ನಡೆದ ಕ್ರಾಂತಿಯಫಲವಾಗಿ ದೇಶದಲ್ಲಿ ಸಂವಿಧಾನಾತ್ಮಕ ರಾಜತಂತ್ರ (ಕಾನ್ಸ್ಟಿಟ್ಯೂಷನಲ್ ಮಾನಾರ್ಕಿ) ಆರಂಭವಾಯಿತು. ಅದರ ಫಲವಾಗಿ ಶಿಕ್ಷಣ ಕ್ಷೇತ್ರದಲ್ಲಿ ನೂತನ ಸುಧಾರಣೆಗಳು ಆಚರಣೆಗೆ ಬಂದವು. ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದ ಲೋಕಸತ್ತೆಯಲ್ಲಿ ಪರಿಣಾಮಕಾರಿಯಾಗಿ ಜನತೆ ಪಾತ್ರ ವಹಿಸುವಂತೆ ಮಾಡಲು ದೇಶಾದ್ಯಂತ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕಾಯಿತು. ಜೊತೆಗೆ ಪ್ರೌಢ ಮತ್ತು ಉನ್ನತ ಶಿಕ್ಷಣಕ್ಕೂ ವ್ಯವಸ್ಥೆ ಮಾಡುವ ಯತ್ನ ನಡೆಯಿತು. ಆದರೆ ಎರಡನೆಯ ಮಹಾಯುದ್ಧದ ಕಾರಣದಿಂದ ಆಗ ಆ ಕಾರ್ಯ ಅಷ್ಟಾಗಿ ಯಶಸ್ಸು ಸಾಧಿಸಲಿಲ್ಲ.

ಶಿಕ್ಷಣ ವ್ಯವಸ್ಥೆ: ಏಳು ವರ್ಷದ ಪ್ರಾಥಮಿಕ ಶಿಕ್ಷಣ ನಾಲ್ಕು ವರ್ಷದ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಮೂರು ವರ್ಷದ ಕಿರಿಯ ಪ್ರಾಥಮಿಕ ಶಾಲೆಯಲ್ಲೂ ಏರ್ಪಟ್ಟಿದೆ. ಅಪರೂಪವಾಗಿ ಎರಡು ವರ್ಷದ ಕಿಂಡರ್‍ಗಾರ್ಟನ್ ತರಗತಿಗಳನ್ನೊಳಗೊಂಡ ಕೆಲವು ಕಿರಿಯ ಪ್ರಾಥಮಿಕ ಶಾಲೆಗಳೂ ಉಂಟು. ಐದು ವರ್ಷದ ಹಿರಿಯ ಪ್ರೌಢಶಾಲೆಗಳಲ್ಲೂ ಏರ್ಪಟ್ಟಿದೆ. 5 ವರ್ಷದ ಪ್ರೌಢಶಿಕ್ಷಣದ ಅನಂತರ ನಡೆಯುವ ಮೆಟ್ರಿಕ್ಯುಲೇಷನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಬಲ್ಲರು. ಕೆಲವು ಉನ್ನತ ವೃತ್ತಿ ಶಿಕ್ಷಣ ಸಂಸ್ಥೆಗಳು ಮತ್ತೊಂದು ವರ್ಷದ ಪ್ರೌಢ ಶಿಕ್ಷಣವನ್ನು ಕಡ್ಡಾಯ ಮಾಡಿರುವುವು.

ಪ್ರಾಥಮಿಕ ಪೂರ್ವದ ಶಿಕ್ಷಣ: ಸರ್ಕಾರದ ಹೊಣೆಗಾರಿಕೆಗೆ ಹೊರತಾಗಿರುವ ಈ ಮಟ್ಟದ ಶಿಕ್ಷಣ ಅಷ್ಟಾಗಿ ವಿಸ್ತರಿಸಿಲ್ಲ. ಇರತಕ್ಕ ಕೆಲವು ಕಿಂಡರ್‍ಗಾರ್ಟನ್ ಶಾಲೆ ಮತ್ತು ಶಿಶುವಿಹಾರಗಳನ್ನು ಸ್ಥಳೀಯ ಪ್ರಾಧಿಕಾರಗಳೂ ಔದ್ಯೋಗಿಕ ಮತ್ತು ಸಾಮಾಜಿಕ ಸಂಸ್ಥೆಗಳೂ ಆರಂಭಿಸಿ ನಡೆಸುತ್ತಿದೆ. ಕೆಲವು ಪ್ರಾಥಮಿಕ ಶಾಲೆಗಳು ಶಿಶುವಿಹಾರದ ತರಗತಿಗಳನ್ನು ನಡೆಸುತ್ತಿವೆ.

ಪ್ರಾಥಮಿಕ ಶಿಕ್ಷಣ: 1921ರಲ್ಲಿ ರಾಜ್ಯ ಶಾಸನವೊಂದರ ಮೂಲಕ 14ನೆಯ ವರ್ಷದ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ಕಡ್ಡಾಯ ಮಾಡಲಾಯಿತು. ಆದರೆ ಅದು ಅಷ್ಟಾಗಿ ಯಶಸ್ವಿಯಾಗಿ ಆಚರಣೆಗೆ ಬಂದಂತೆ ತೋರುವುದಿಲ್ಲ. ದೇಶದಲ್ಲಿ ಒಟ್ಟು 22,000 ಪ್ರಾಥಮಿಕ ಶಾಲೆಗಳಿವೆ.

ಪ್ರೌಢ ಶಿಕ್ಷಣ: ಪ್ರೌಢ ಶಾಲೆಗಳು ಎರಡನೆಯ ಮಹಾಯುದ್ಧದ ಅನಂತರ ತೀವ್ರ ವೇಗದಲ್ಲಿ ಹೆಚ್ಚುತ್ತಿದೆ. ಇದಕ್ಕೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮಾಡಿರುವುದೂ ರಾಜಕೀಯ ಪ್ರಜ್ಞೆಯ ಪ್ರಚೋದನೆಯೂ ಕಾರಣಗಳೆನ್ನಬಹುದು. ಪ್ರೌಢಶಿಕ್ಷಣದ ಅಂತ್ಯದಲ್ಲಿ ನಡೆಯುವ ಮೆಟ್ರಿಕ್ಯುಲೇಷನ್ ಪರೀಕ್ಷೆ ವಿಶ್ವವಿದ್ಯಾಲಯಕ್ಕೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಪ್ರವೇಶ ಪರೀಕ್ಷೆ ಎನಿಸಿದೆ.

ಉನ್ನತ ಶಿಕ್ಷಣ: ಥೈಲೆಂಡಿನ ಏಳು ವಿಶ್ವವಿದ್ಯಾಲಯಗಳಲ್ಲಿ ಒಟ್ಟು 30,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವರು. ಅವರಲ್ಲಿ 300 ಕ್ಕೂ ಹೆಚ್ಚು ಮಂದಿ ಮಾಸ್ಟರ್ ಪದವಿಗೂ ನಾಲ್ಕು ಮಂದಿ ಡಾಕ್ಟರ್ ಪದವಿಗೂ ಶಿಕ್ಷಣ ಪಡೆಯುತ್ತಿರುವರು. ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯಲ್ಲಿ (ನ್ಯಾಷನಲ್ ಡೆವಲಪ್‍ಮೆಂಟ್ ಇನ್ಸಿಟಿಟ್ಯೂಟ್) 810 ಮಂದಿ ಆಡಳಿತ ಪದ್ಧತಿಯಲ್ಲಿ ಶಿಕ್ಷಣ ಪಡೆಯುತ್ತಿರುವರು. ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸುಮಾರು 100 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವರು. 

1917 ರಲ್ಲಿ ಆರಂಭವಾದ ಬಾಂಕಾಕಿನ ಚೂಳಾಲಾಂಗ್ಕಾರ್ನ್ ವಿಶ್ವವಿದ್ಯಾಲಯವೇ ಥೈಲೆಂಡಿನ ಪ್ರಥಮ ವಿಶ್ವವಿದ್ಯಾಲಯ. ಅನಂತರ 1964ರಲ್ಲಿ ಚಿಯೆಂಗ್‍ಮೈ ವಿಶ್ವವಿದ್ಯಾಲಯವೂ 1964-65ರಲ್ಲಿ ಕೊನ್‍ಖಿನ್ ವಿಶ್ವವಿದ್ಯಾಲಯವೂ 1968ರಲ್ಲಿ ದಕ್ಷಿಣದ ಸಿಲ್ಪ್‍ಕಾರ್ನ್ ವಿಶ್ವವಿದ್ಯಾಲಯವೂ ಆರಂಭವಾದವು. ಇವು ಪ್ರಾಂತೀಯ ವಿಶ್ವವಿದ್ಯಾಲಯಗಳು. ಅದು ತನಕ ಉನ್ನತ ಶಿಕ್ಷಣದ ಸೌಲಭ್ಯ ರಾಜಧಾನಿಯಲ್ಲಿ ಮಾತ್ರವಿತ್ತು. ಈಗ ಅದು ಪ್ರಾಂತೀಯ ಭಾಗಗಳಿಗೂ ವಿಸ್ತರಿಸಲು ಅವಕಾಶವಾಯಿತು. ಜೊತೆಗೆ ವಿಶ್ವವಿದ್ಯಾಲಯ ಸಾರ್ವಜನಿಕ ಸೇವಾಕಾರ್ಯಕ್ಕೆ ಮಾತ್ರ ಶಿಕ್ಷಣವೀಯುವ ಸಂಸ್ಥೆಗಳು ಎಂಬ ಭಾವನೆ ಕಡಿಮೆಯಾಯಿತು. ನೂತನ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಮತ್ತು ನೈತಿಕ ಅಧ್ಯಯನಕ್ಕೂ ಅವಕಾಶ ಕಲ್ಪಿಸಲಾಯಿತು.
ವಿಶ್ವವಿದ್ಯಾಲಯಗಳ ಆಡಳಿತವನ್ನು ಬಹುಮಟ್ಟಿಗೆ ಸರ್ಕಾರವೇ ನಿರ್ವಹಿಸುತ್ತಿದೆ. ಕಾಸೀಟಾಟ್ರ್ಸ್ (ಕೃಷಿ ವಿಶ್ವವಿದ್ಯಾಲಯ) ಅನ್ನು ಕೃಷಿ ಸಚಿವಾಲಯವೂ ತಮ್ಮಸಾಟ್ ವಿಶ್ವವಿದ್ಯಾಲಯವನ್ನು ಗೃಹ ಸಚಿವಾಲಯವೂ ವೈದ್ಯ ವಿಶ್ವವಿದ್ಯಾಲಯವನ್ನು ಸಾರ್ವಜನಿಕ ಆರೋಗ್ಯ ಸಚಿವಾಲಯವೂ ನೋಡಿಕೊಳ್ಳುತ್ತವೆ. 1954ರಲ್ಲಿ ಆರಂಭವಾದ ಶಿಕ್ಷಣ ಶಾಸ್ತ್ರದ ಕಾಲೇಜು ಶಿಕ್ಷಣ ಸಚಿವಾಲಯದ ಆಡಳಿತಕ್ಕೆ ಒಳಪಟ್ಟಿದೆ.

ಕಲಾಶಾಸ್ತ್ರಗಳು, ಶಿಕ್ಷಣಶಾಸ್ತ್ರ, ಎಂಜಿನಿಯರಿಂಗ್, ವಿe್ಞÁನಶಾಸ್ತ್ರಗಳು, ವಾಸ್ತು, ವಾಣಿಜ್ಯ, ಲೆಕ್ಕಶಾಸ್ತ್ರ, ನ್ಯಾಯಶಾಸ್ತ್ರ, ಅರ್ಥಶಾಸ್ತ್ರ, ಸಾಮಾಜಿಕ ಆಡಳಿತ, ಪತ್ರಿಕೋದ್ಯಮ, ಔಷಧನಿರ್ಮಾಣಶಾಸ್ತ್ರ, ದಂತವೈದ್ಯ, ಉದಾರ ಕಲೆಗಳು, ವೈದ್ಯವಿದ್ಯೆ, ವ್ಯವಸಾಯ, ಸಾರ್ವಜನಿಕ ಆರೋಗ್ಯ, ಪಶುವೈದ್ಯ, ಗ್ರಾಮೀಣ ಅರ್ಥಶಾಸ್ತ್ರ, ಅಲಂಕರಣ ಕಲೆಗಳು- ಇವುಗಳಲ್ಲಿ ಥೈಲೆಂಡಿನ ವಿವಿಧ ವಿಶ್ವವಿದ್ಯಾಲಯಗಳು ಶಿಕ್ಷಣವೀಯುತ್ತಿವೆ.

ಅಧ್ಯಾಪಕರ ಶಿಕ್ಷಣ: ಈ ಶಿಕ್ಷಣ ನಾಲ್ಕು ಮಟ್ಟಗಳಲ್ಲಿ ವ್ಯವಸ್ಥೆಗೊಂಡಿದೆ. ಹತ್ತನೆ ತರಗತಿ ಮುಗಿಸಿದವರು ಟೀಚರ್ಸ್ ಟ್ರೈನಿಂಗ್ ಸ್ಕೂಲಿನಲ್ಲಿ ಎರಡು ವರ್ಷದ ಶಿಕ್ಷಣ ಪಡೆಯುವರು. ಏಳನೆಯ ತರಗತಿ ಮುಗಿಸಿದವರು ಗ್ರಾಮೀಣ ಶಿಕ್ಷಣ ಸಂಸ್ಥೆಗಳಲ್ಲಿ ಐದು ವರ್ಷದ ಶಿಕ್ಷಣ ಪಡೆದು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗುವರು. ಹನ್ನೆರಡನೆಯ ತರಗತಿ ಮುಗಿಸಿದವರು ಎರಡು ವರ್ಷದ ಟೀಚರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗುವರು. ಬ್ಯಾಂಕಾಕಿನ ಚೂಳಾಲಂಗ್ಕಾರ್ನ್ ವಿಶ್ವವಿದ್ಯಾಲಯದ ಟೀಚರ್ಸ್ ಕಾಲೇಜು ಬ್ಯಾಚುಲರ್ ಮತ್ತು ಮಾಸ್ಟರ್ ಪದವಿಗಳಿಗೆ ಶಿಕ್ಷಣವೀಯುತ್ತವೆ.

ವೃತ್ತಿ ಮತ್ತು ಔದ್ಯೋಗಿಕ ಶಿಕ್ಷಣ: ಥೈಲೆಂಡಿನಲ್ಲಿ ವಿವಿಧ ವೃತ್ತಿ ಶಿಕ್ಷಣಕ್ಕೆ ವ್ಯವಸ್ಥೆ ಇದ್ದರೂ ಅಲ್ಲಿನ ಜನತೆಗೆ ಅದರಲ್ಲಿ ಆಸಕ್ತಿ ಕಡಿಮೆ. ಆ ಸಂಸ್ಥೆಗಳಿಗೆ ಅಭ್ಯರ್ಥಿಗಳನ್ನು ಆಕರ್ಷಿಸಲು, ಅಲ್ಲಿ ಶಿಕ್ಷಣ ಪಡೆದವರನ್ನು ಪ್ರಾಥಮಿಕ ಶಾಲೆಗಳಲ್ಲಿ ಅಧ್ಯಾಪಕರನ್ನಾಗಿ ನೇಮಿಸಿಕೊಳ್ಳುವ ಅವಕಾಶವನ್ನು 1930 ರ ಕಾನೂನೊಂದರ ಮೂಲಕ ಕಲ್ಪಿಸಲಾಯಿತು. ಅದರ ಫಲವಾಗಿ ವೃತ್ತಿ ಶಿಕ್ಷಣಕ್ಕೆ ಬರತಕ್ಕವರ ಸಂಖ್ಯೆ ಹೆಚ್ಚುತ್ತ ಬಂತು. ಆದರೆ ಆ ಸೌಲಭ್ಯವನ್ನು ಸರ್ಕಾರ ಈಚೆಗೆ ಹಿಂತೆಗೆದುಕೊಂಡಿತು. ಅದರ ಫಲವಾಗಿ ಮತ್ತೆ ವೃತ್ತಿಶಿಕ್ಷಣ ಸಂಸ್ಥೆಗಳು ಅಷ್ಟಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲಾರದಾಗಿವೆ.

ನೂತನ ಪ್ರವೃತ್ತಿಗಳು ಮತ್ತು ಸಮಸ್ಯೆಗಳು: ಥೈಲೆಂಡಿನಲ್ಲಿ ಶಿಕ್ಷಣ ಸೌಲಭ್ಯ ದೇಶಾದ್ಯಂತ ಸಮಾನ ರೀತಿಯಲ್ಲಿ ವಿಸ್ತರಿಸಿಲ್ಲ. ಇಡೀ ಶಿಕ್ಷಣ ಸೌಲಭ್ಯದ 1/2 ಭಾಗ ರಾಜಧಾನಿಯಲ್ಲಿ ಕೇಂದ್ರೀಕೃತವಾಗಿದೆ. ಆದರೆ ಅಲ್ಲಿನ ಜನಸಂಖ್ಯೆ ರಾಷ್ಟ್ರದ ಜನಸಂಖ್ಯೆಯ 1/10 ಭಾಗ ಮಾತ್ರ. ಪ್ರಾಂತೀಯ ವಿಶ್ವವಿದ್ಯಾಲಯಗಳು ಆರಂಭವಾದ ಮೇಲೆ ಈ ಅಸಮಾನತೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.

ಥೈಲೆಂಡಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಪಾರ ಅಪವ್ಯಯವಾಗುತ್ತಿದೆ. ದೇಶದಲ್ಲಿ ದಿನದಿನಕ್ಕೂ ಹೆಚ್ಚುತ್ತಿರುವ ವಿವಿಧ ದೇಶಗಳ ರಾಜಕೀಯ ಚಟುವಟಿಕೆಗಳ ಫಲವಾಗಿ ಅಲ್ಲಿನವರು ವಿವಿಧ ಭಾಷೆಗಳನ್ನು ಕಲಿಯಬೇಕಾಗಿ ಬಂದು ಅವಕ್ಕೆಲ್ಲ ಅವಕಾಶ ಕಲ್ಪಿಸುವುದು ಶಿಕ್ಷಣ ಸಂಸ್ಥೆಗಳಿಗೆ ಕಷ್ಟದ ಕೆಲಸವಾಗಿದೆ. ಜೊತೆಗೆ ಉನ್ನತ ತಾಂತ್ರಿಕ ಶಿಕ್ಷಣಕ್ಕೆ ಹೋಗತಕ್ಕವರು ಇಂಗ್ಲಿಷ್, ರಷ್ಯನ್, ಜರ್ಮನ್, ಫ್ರೆಂಚ್ - ಈ ಭಾಷೆಗಳಲ್ಲಿ ಯಾವುದನ್ನಾದರೂ ಕಲಿಯಬೇಕಾಗಿದೆ. ಈ ತೊಡಕಿನ ನಿವಾರಣೆಗೆ ಸೂಕ್ತ ಸಲಹೆ ನೀಡಲು ಸರ್ಕಾರ 1968 ರಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಆ ಸಮಿತಿ ವಿಷಯವನ್ನು ಪರಿಶೀಲಿಸಿ ಶಾಲಾಕಾಲೇಜುಗಳಲ್ಲಿ ವಿe್ಞÁನ ವಿಷಯಗಳ ಬೋಧನೆಯನ್ನು ಉತ್ತಮಪಡಿಸಬೇಕೆಂದೂ ಇಂಗ್ಲಿಷಿನ ಅಧ್ಯಯನಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಬೇಕೆಂದೂ ಸಲಹೆ ಮಾಡಿತು. ಈ ಸಲಹೆ ಈಗ ಆಚರಣೆಗೆ ಬರುತ್ತಿದೆ. 				
		(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ